ಉಳ್ಳಾಲ, ಜ 27 (DaijiworldNews/DB): ಕೋಟೆಕಾರು ಪಟ್ಟಣ ಪಂಚಾಯತ್ಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ. ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದಾರೆ.
ಬಗಂಬಿಲದ ಸರ್ವೇ ನಂ. 301/3ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ ಸಲ್ಲಿಸಿದೆ. ಈ ನಡುವೆ ವ್ಯಾಜ್ಯ ಇತ್ಯರ್ಥವಾಗುವ ಮೊದಲೇ ಉಳ್ಳಾಲ ಪುರಸಭೆ ಏಕಾಏಕಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸುತ್ತಿದೆ. ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರ ಅನುಮತಿ ಪಡೆಯದೇ ಇರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಭೂ ಮಾಫಿಯಾ ಕೈಜೋಡಿಸಿರುವ ಸಂಶಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿಸಿ ನ್ಯಾಯ ದೊರಕಿಸಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಗ್ರಾಮ ಕರಣಿಕರು ಹಾಗೂ ಎನ್ಇಸಿಎಫ್ ಅಧಿಕಾರಿಗಳಿಗೂ ದೂರು ನೀಡಲಾಗಿದೆ.