ಉಡುಪಿ, ಜ 27 (DaijiworldNews/DB): ಸಿದ್ದರಾಮಯ್ಯ ನನ್ನನ್ನು ಪಕ್ಷಾಂತರಿ ಎಂದಿದ್ದಾರೆ. ಆದರೆ ಅವರು ಏಳು ಪಕ್ಷ ಸೇರಿದ್ದಾರೆ. ಪಕ್ಷಾಂತರ ಅಷ್ಟೊಂದು ದೊಡ್ಡ ಪಿಡುಗು ಆದರೆ ಕಾಂಗ್ರೆಸ್ ಇತರ ಪಕ್ಷದಲ್ಲಿ ಅಧಿಕಾರ ಪಡೆದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿಲಿ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದ ಮೊದಲ ಪಕ್ಷಾಂತರಿ ನಾನಲ್ಲ. ನನ್ನನ್ನು ಏಕವಚನದಲ್ಲಿ ಮಾತಾಡಿದ್ದಾರೆ. ನಾನು ಅವರ ಸಂಪುಟದಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದೆ. ಅವರ ಸಂಪುಟದಲ್ಲಿ ಇದ್ದ ಸಚಿವರಿಗೆ ಹೀಗೆ ಮಾತನಾಡುತ್ತಾರೆ ಎಂದರೆ ಜನಸಾಮಾನ್ಯರ ಬಳಿ ಇವರು ಹೇಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.
ಏಕವಚನದಲ್ಲಿ ಮಾತನಾಡಲು ನಮಗೂ ಬರುತ್ತೆ.ಆದರೆ ನಮ್ಮ ತಂದೆ ತಾಯಿ ನಮಗೆ ಅಂತಹ ಸಂಸ್ಕಾರ ನೀಡಿಲ್ಲ. ನಾನು ಜೆಡಿಎಸ್ ಸೇರಿದ್ದೆ ಎಂದು ಅವರು ಹೇಳಿದ್ದಾರೆ. ನಾನು ಟಿಕೆಟ್ ಕೇಳುವಾಗ ಇದು ಮೈತ್ರಿ ಸೀಟ್ ಆಗಿತ್ತು. ಉಡುಪಿ ಸೀಟ್ ಜೆಡಿಎಸ್ ಗೆ ಕೊಟ್ಟಾಗ ನಾನು ಪ್ರಶ್ನೆ ಮಾಡಿದ್ದೆ. ಆಗ ಸಿದ್ದರಾಮಯ್ಯನವರು ಜೆಡಿಎಸ್ ನವರು ಮೈಸೂರು ಕ್ಷೇತ್ರ ಕೇಳಿದ್ದಾರೆ. ಅದು ನೀಡಲು ನನಗೆ ಮನಸ್ಸಿಲ್ಲ. ಹೀಗಾಗಿ ಉಡುಪಿ - ಉತ್ತರ ಕನ್ನಡ ಕ್ಷೇತ್ರ ನೀಡುತ್ತೆನೆ ಎಂದಿದ್ದರು. ಸಿದ್ದರಾಮಯ್ಯ - ಗುಂಡೂರಾವ್ ಪೂರ್ವ ಅನುಮತಿ ಪಡೆದು ಜೆಡಿಎಸ್ ಸದಸ್ಯತನ ಪಡೆದ ಹಾಗಾಗಿತ್ತು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ನನ್ನನ್ನು ಉಚ್ಚಾಟನೆ ಮಾಡಿಲ್ಲ. ಹೀಗಾಗಿ ಸುಳ್ಳು ಹೇಳಿರುವುದನ್ನು ನಾನು ಖಂಡಿಸುತ್ತೇನೆ. ಜೆಡಿಎಸ್ ತಾಂತ್ರಿಕ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿದ್ದು ಎಂದರು.
ಇದಕ್ಕೂ ಮೊದಲು ಉಡುಪಿ - ಚಿಕ್ಕಮಗಳೂರು ಕಾಂಗ್ರೆಸ್ ಅಧ್ಯಕ್ಷರು ಜೆಡಿಎಸ್ ನಾಯಕರ ಮನೆಗೆ ಹೋಗಿ ಎಷ್ಟು ಪಾರ್ಟಿ ಫಂಡ್ ಕೊಡುತ್ತೀರಿ ಎಂದು ಕೇಳಿದ್ದರು. ಜೆಡಿಎಸ್ ನಿಂದ ಬಂದ ಫಂಡನ್ನು ಜಿಲ್ಲಾ ಕಾಂಗ್ರೆಸ್ ಪಡೆದಿದೆ. ಎಲ್ಲಾ ಹಂಚಿಕೆ ಮಾಡಿದ್ದೇನೆ ಎಂದವರು ತಿಳಿಸಿದರು.
ನನ್ನ ತಂದೆ ತಮ್ಮ ಸ್ವಂತ ಹಣದಿಂದ ಪಕ್ಷ ಕಟ್ಟಿದ ಕಾರಣಕ್ಕೆ ಅವರಿಗೆ ಸ್ಥಾನ ನೀಡಲಾಗಿತ್ತು. ನನ್ನ ತಾಯಿಗೆ ಅವರ ಪ್ರಾಮಾಣಿಕ ಸೇವೆಗೆ ಪಕ್ಷ ಸ್ಥಾನ ನೀಡಿದೆ. ನಾನು ಕೂಡಾ ನನ್ನ ಸ್ವಂತ ಹಣದಿಂದ ಪಕ್ಷ ಕಟ್ಟಿದ್ದೇನೆ. ಇನ್ನೊಬ್ಬರ ಕಿಸೆಯಿಂದ ಹಣ ಪಡೆದು ಪಕ್ಷ ಕಟ್ಟುವುದು ದೊಡ್ಡ ವಿಷಯ ಅಲ್ಲ. ಲಂಚದ ಹಣದಿಂದ ನಾನು ಪಕ್ಷ ಕಟ್ಟಿಲ್ಲ. ಕಾಂಗ್ರೆಸ್ ಕೊಟ್ಟ ಹುದ್ದೆಯನ್ನು ನಾನು ಲಂಚ ಪಡೆಯಲು ಉಪಯೋಗಿಸಿಲ್ಲ. ಜನರ ಸೇವೆ ಮಾಡಲು ಅದನ್ನು ಉಪಯೋಗ ಮಾಡಿದ್ದೇನೆ ಎಂದವರು ವಿವರಿಸಿದರು.
ಎಸ್.ಎಂ. ಕೃಷ್ಣ ಬಿಜೆಪಿಗೆ ಸೇರಿದಾಗ ಯಾಕೆ ಟೀಕೆ ಮಾಡಿಲ್ಲ? ಎಸ್ ಎಂ ಕೃಷ್ಣ ಮೊಮ್ಮಗನಿಗೆ ತಮ್ಮ ಮಗಳನ್ನು ನೀಡುವಾಗ ಪಕ್ಷಾಂತರಿ ಎಂದು ಗೊತ್ತಾಗಿಲ್ಲ್ವಾ? 2023ರ ಚುನಾವಣೆಯಲ್ಲಿ ಉಡುಪಿ ಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಯಾರೇ ನಿಂತರೂ ಅವರನ್ನು ಗೆಲ್ಲಿಸುವ ಸಾಮರ್ಥ್ಯ ಬಿಜೆಪಿ ಕಾರ್ಯಕರ್ತರಿಗೆ ಇದೆ. ಪ್ರಮೋದ್ ಬಿಜೆಪಿ ಸೇರಿದರೂ ಕಾರ್ಯಕರ್ತರಾರೂ ಸೇರಿಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಏಕಾಏಕಿ ಬಂದು ಕಾಂಗ್ರೆಸ್ನವರು ಸೇರಲು ಅವಕಾಶ ಇಲ್ಲ. ಅದಕ್ಕೆ ಒಂದು ಪ್ರಕ್ರಿಯೆ ಇದೆ. ಎಲ್ಲಾ ಶಕ್ತಿ ಕೇಂದ್ರ ದ ಅಧ್ಯಕ್ಷರನ್ನು ಸಂಪರ್ಕ ಮಾಡಲು ಹೇಳಿದ್ದೇನೆ. ಕಾಂಗ್ರೆಸ್ ದ ಬಿಜೆಪಿಗೆ ಬರುವವರನ್ನು ಸೇರಿಸಿಕೊಳ್ಳಲು ಹೇಳಿದ್ದೇನೆ. ಚುನಾವಣೆ ಹತ್ತಿರ ಬರುವಾಗ ಎಷ್ಟು ಜನ ಸೇರುತ್ತಾರೆ ಎಂಬುವುದು ಸ್ಚಷ್ಟ ಆಗುತ್ತೆ. ಇಷ್ಟು ಬೇಗ ಅಭಿನಂಧನೆ ಸಲ್ಲಿಸಬೇಡಿ ಡಿಕೆಶಿಯವರೇ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಎಲ್ಲರೂ ವೇದಿಕೆ ಹತ್ತಿ ಕುಳಿತುಕೊಳ್ಳುವಂತೆ ಇಲ್ಲ. ಇಲ್ಲಿ ಒಂದು ಶಿಸ್ತು ಇದೆ. ಕಾಂಗ್ರೆಸ್ ನಲ್ಲಿ ಎಲ್ಲರೂ ವೇದಿಕೆಯಲ್ಲಿ ಹತ್ತುತ್ತಾರೆ. ಕಾಂಗ್ರೆಸ್ ನಲ್ಲಿ ನಾಯಕರು ಜಾಸ್ತಿ ಆಗಿದ್ದಾರೆ. ಕಾರ್ಯಕರ್ತರು ಕಡಿಮೆ ಆಗಿದ್ದಾರೆ. ಕಾರ್ಯಕರ್ತರೊಂದಿಗೆ ಕುಳಿತುಕೊಳ್ಳಲು ನನಗೆ ಖುಷಿ ಇದೆ. ನಾನು ಶರ್ತ ಹಾಕದೇ ಬಂದಿರುವವನು. ಟಿಕೆಟ್ ಪಕ್ಷ ಕೊಟ್ಟರೆ ನಿಲ್ಲುತ್ತೇನೆ. ಇಲ್ಲದಿದ್ದಲ್ಲಿ ಇನ್ನಿತರ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದರು.
ಮೋದಿಯನ್ನು ಪ್ರಮೋದ್ ಆರ್ ಎಸ್ ಎಸ್ ಗಿಂತ ಹೆಚ್ಚಾಗಿ ಹೊಗಳುತ್ತಾರೆ ಎಂದ ಸಿದ್ದರಾಮಯ್ಯ ಹೇಳಿಕ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಮೋದಿಯವರನ್ನು ಹೊಗಳದೇ ಇನ್ನು ಯಾರನ್ನು ಹೊಗಳಬೇಕು? ಸಿದ್ದು - ಡಿಕೆಶಿ ಕೂಡಾ ಮೋದಿಯನ್ನು ಪರೋಕ್ಷವಾಗಿ ಹೊಗಳಿದರೆ ನಾಲ್ಕು ಮತ ಹೆಚ್ಚು ಬರುತ್ತದೆ ಎಂದು ಕುಟುಕಿದರು.