ಕುಂದಾಪುರ, ಜ 26( DaijiworldNews/MS): ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳ ಮೂಲಕ ದೇಶಕ್ಕೆ ಭದ್ರ ಬುನಾದಿಯನ್ನು ಹಾಕುವ ಆಶಯಗಳು ಅಸ್ತಿತ್ವಕ್ಕೆ ಬಂದ ಶ್ರೇಷ್ಠ ದಿನ.
ನಾಗರಿಕರು ತಮ್ಮ ಸರ್ಕಾರವನ್ನು ಚುನಾಯಿಸುವ ಅಧಿಕಾರ ಹೊಂದಿರುವ ಹಿರಿಮೆಯ "ಪ್ರಜಾಪ್ರಭುತ್ವ" ವ್ಯವಸ್ಥೆಯನ್ನು ನಮ್ಮ ಹಿರಿಯರು ಆಯ್ಕೆ ಮಾಡಿಕೊಂಡದ್ದು ದೂರಿದರ್ಶಿತ್ವಕ್ಕೆ ಸಾಕ್ಷಿ ಡಾ| ಬಿ ಆರ್ ಅಂಬೇಡ್ಕರ್, ಬಾಬು ರಾಜೇಂದ್ರ ಪ್ರಸಾದ್ರಂತಹ ಮಹಾನೀಯರ ಸಾರಥ್ಯದಲ್ಲಿ ವಿಶ್ವದ ಅತೀ ದೊಡ್ಡದಾದ ಸಂವಿಧಾನವನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಾಂತಿ, ಅಭಿವೃದ್ಧಿ, ಮತ್ತು ವಿಕಾಸಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂವಿಧಾನ ನಿಜವಾದ ತಳಹದಿಯಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದರು.
ಕುಂದಾಪುರದ ಗಾಂಧೀ ಮೈದಾನದಲ್ಲಿ, ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಸಂದೇಶ ಸಾರಿದರು.
ಈ ಸಂದರ್ಭ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕುಂದಾಪುರ ಪೊಲೀಸರಿಂದ ಪರೇಡ್ ನಡೆಯಿತು. ಕುಂದಾಪುರ ತಾಲೂಕಿನ ಐದು ಹಾಗೂ ಬೈಂದೂರು ತಾಲೂಕಿನ ಮೂವರಿಗೆ ಶ್ರೇಷ್ಟ ಕೃಷಿ ಪ್ರಶಸ್ತಿ, ಮೂವರಿಗೆ ಗ್ರಾಮ ವನ್ ಪ್ರಾಂಚೈಸಿ ಸನ್ಮಾನ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಡಿವೈಎಸ್ಪಿ ಬೆಳ್ಳಿಯಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಮೊದಲಾದವರು ಉಪಸ್ಥಿತರಿದ್ದರು.