ಮಂಗಳೂರು, ಮಾ 12 (MSP): ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದ್ದು ಕಡಲನಗರಿ ಮಂಗಳೂರು ಕಟೌಟ್ ಮತ್ತು ಬ್ಯಾನರ್ಗಳಿಲ್ಲದೆ ಸ್ವಚ್ಚ ಸುಂದರ ನಗರವಾಗಿ ನಳನಳಿಸುತ್ತಿದೆ. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿದ್ದ ಎಲ್ಲಾ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದ್ದು, ಇನ್ಮುಂದೆ ಸಾರ್ವಜನಿಕ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಯಾವುದೇ ಪೋಸ್ಟರ್ , ಕಟೌಟ್, ಬ್ಯಾನರ್, ಫಲಕ ಅಳವಡಿಸುವಂತಿಲ್ಲ.ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಭಂಧಿಸಿದ ಬ್ಯಾನರ್ ಹಾಕಲು ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಸರ್ಕಾರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಜಾಹೀರಾತು ನಗರದ ಬಹುತೇಕ ಸರ್ಕಾರಿ ಕಚೇರಿಯಲ್ಲಿ ಹಾಕಲಾಗಿತ್ತು. ಇದನ್ನು ಕೂಡ ಸೋಮವಾರ ತೆಗೆದು ಹಾಕಲಾಗಿದೆ. ಮಾತ್ರವಲ್ಲದೆ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇದ್ದ ಬೃಹತ್ ಎಲ್ ಇ ಡಿ ಸ್ಕ್ರೀನ್ ಕೂಡಾ ಇದೀಗ ಬಂದ್ ಆಗಿದೆ.
ಈಗಾಗಲೇ ನಗರದ ಕೆಲವು ಭಾಗಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿ ಮತ್ತು ಟಿಕೆಟ್ ಆಕಾಂಕ್ಷಿಗಳ ಬ್ಯಾನರ್ ಗಳು, ಜಾತ್ರೆ ಬ್ರಹ್ಮಕಲಶೋತ್ಸವ ಶುಭಾಶಯ ಕಟೌಟ್ ಗಳು ರಾರಾಜಿಸುತ್ತಿದ್ದವು. ಆದರೆ ಸದ್ಯ ಅವುಗಳನ್ನೆಲ್ಲವೂ ತೆರವುಗೊಳಿಸಲಾಗಿದ್ದು ಹೀಗಾಗಿ ಮಂಗಳೂರು ಈಗ ಬ್ಯಾನರ್ ಮುಕ್ತ ನಗರವಾಗಿ ಕಂಗೊಳಿಸುತ್ತಿದೆ.