ಮಂಗಳೂರು, ಜ 26 (DaijiworldNews/DB): ವಿಶ್ವ ಕೊಂಕಣಿ ಕೇಂದ್ರದ ರೂವಾರಿ ಹಾಗೂ ವಿಶ್ವ ಕೊಂಕಣಿ ಸರದಾರ ದಿವಂಗತ ಬಸ್ತಿ ವಾಮನ ಶೆಣೈ ಅವರ ಲೋಹದ ಪ್ರತಿಮೆ ವಿಶ್ವ ಕೊಂಕಣಿ ಕೇಂದ್ರದ ಮುಖ ಮಂಟಪದಲ್ಲಿ ನಿರ್ಮಾಣಗೊಂಡಿದೆ. ಆ ಮೂಲಕ ಬಸ್ತಿ ವಾಮನ ಶೆಣೈ ಅವರ ಸಾರ್ಥಕ ಸಾಧನೆಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಪ್ರಯತ್ನ ನಡೆದಿದೆ.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮುದಾಯದ ಏಳಿಗೆಗಾಗಿ ದಿ. ಬಸ್ತಿ ವಾಮನ ಶೆಣೈ ಅವರು ಶ್ರಮಿಸಿದ್ದರು. ಕೊಂಕಣಿ ಸಮಾಜದ ಅಭಿವೃದ್ದಿಯಲ್ಲಿ ಅವರ ಸೇವೆ ದೊಡ್ಡದು. ಸದಾ ನಗುಮೊಗದ ವ್ಯಕ್ತಿತ್ವ, ಸಮಾಜದ ಯಾವುದೇ ಕೆಲಸಗಳಲ್ಲಿಯೂ ಸದಾ ಮುಂಚೂಣಿಯಲ್ಲಿದ್ದು ಪ್ರೇರೇಪಿಸುತ್ತಿದ್ದ ಧೀಮಂತ ವ್ಯಕ್ತಿತ್ವದ ವಾಮನ ಶೆಣೈ ಅವರ ಸಾರ್ಥಕ ಸಾಧನೆಗಳನ್ನು ಮುಂದಿನ ತಲೆಮಾರಿಗೂ ಪರಿಚಯಿಸುವ ಉದ್ದೇಶದಿಂದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಅವರ ಲೋಹದ ಪ್ರತಿಮೆ ನಿರ್ಮಾಣಗೊಂಡಿದೆ.
ಪ್ರತಿಮೆಯು ಸುಮಾರು 250 ಕೆಜಿ ತೂಕ ಹಾಗೂ 6.5 ಅಡಿ ಎತ್ತರವನ್ನು ಹೊಂದಿದೆ. ವಿಶ್ವಕೊಂಕಣಿ ಕೇಂದ್ರದ ಮುಖ ಮಂಟಪದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅನಾವರಣಕ್ಕೆ ಸಜ್ಜಾಗಿದೆ. ಮಂಗಳೂರಿನ ವಿಭಿನ್ ಸಂಸ್ಥೆಯ ಉಸ್ತುವಾರಿಯಲ್ಲಿ ಉತ್ತರ ಪ್ರದೇಶದ ಅಲೀಘರ್ನ ಲೋಹ ಶಾಲೆಯಲ್ಲಿ ಪ್ರತಿಮೆಯ ನಿರ್ಮಾಣ ಕಾರ್ಯ ನಡೆದಿದ್ದು, ಇದಕ್ಕೆ ಮೂರು ತಿಂಗಳು ತಗುಲಿದೆ. ಆವೆ ಮಣ್ಣಿನ ಪ್ರತಿಕೃತಿ ರಚಿಸಿ ಅದಕ್ಕೆ ಹಿತ್ತಾಳೆ ಲೋಹದ ಎರಕ ಹೊಯ್ಯಲಾಗಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಗೆ ವಿಶ್ವ ಕೊಂಕಣಿ ಕೇಂದ್ರದ ಮಹಾ ಪೊಷಕ, ಗೌರವ ಅಧ್ಯಕ್ಷ ಡಾ| ಪಿ. ದಯಾನಂದ ಪೈ ಅವರು ಪ್ರಾಯೋಜಕತ್ವ ವಹಿಸಿದ್ದಾರೆ.
ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಕೊಂಕಣಿ ಸೇರ್ಪಡೆಗೊಳ್ಳಲು ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗುವಲ್ಲಿ ಬಸ್ತಿ ವಾಮನ ಶೆಣೈ ಅವರ ಪಾಲು ದೊಡ್ಡದು. ಇದಕ್ಕಾಗಿ ತಮ್ಮ ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ಹೋರಾಡಿದ್ದರು. ಅಕಾಡೆಮಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಅವರು ಸಾಹಿತ್ಯ, ಸಂಘಟನೆಗಳಲ್ಲಿ ಸದಾ ಸಿದ್ದಹಸ್ತರು. ವಿಶ್ವ ಕೊಂಕಣಿ ಸರದಾರ, ವಿಶ್ವ ಸಾರಸ್ವತ ಸರದಾರ ಬಿರುದುಗಳ ಮೂಲಕ ಜನಜನಿತರಾದವರು.
ಬಸ್ತಿ ಮಾಮು ಎಂದೇ ಕರೆಯಲ್ಪಡುತ್ತಿದ್ದ ವಾಮನ ಶೆಣೈ ಅವರ ಕೆಲಸ ಅವರೊಂದಿಗೆ ಒಡನಾಟದಲ್ಲಿದ್ದವರಿಗೆ ಸದಾ ಪ್ರೇರಣೆಯಾಗಿದೆ. ಫೆಬ್ರವರಿ 8ರಂದು ಸಂಜೆ 5 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಮತ್ತಿತರರ ಸಮ್ಮುಖದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಸಿಇಒ ಗುರುದತ್ ಬಂಟ್ವಾಳಕರ್ ತಿಳಿಸಿದ್ದಾರೆ.