ಉಳ್ಳಾಲ, ಜ 25 (DaijiworldNews/SM): ಇಲ್ಲಿನ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಡ್ಯಾರು ವಿದ್ಯಾರ್ಥಿನಿ ನಿಲಯದ ಅವ್ಯವಸ್ಥೆ ಕುರಿತಂತೆ ದೈಜಿವರ್ಲ್ಡ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಇದೀಗ ಸ್ಥಳಕ್ಕೆ ದೌಢಿಯಿಸಿರುವ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮೀ ಎಸ್.ಆರ್. ಅವರು, ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಡ್ಯಾರು ವಿದ್ಯಾರ್ಥಿನಿ ನಿಲಯದ ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿ ಕರ್ನಾಟಕ ಗೃಹ ಮಂಡಳಿ ಮೇಲಿದೆ. ಒಂದು ವರ್ಷದಿಂದ ಅವರೇ ನಿರ್ವಹಿಸುತ್ತಾ ಬಂದಿರುತ್ತಾರೆ. ಕೋಟೆಕಾರು ಪಟ್ಟಣ ಪಂಚಾಯಿತಿಯಿಂದ ಕುಡಿಯುವ ನೀರು ಪೂರೈಸಲು ಎರಡು ಕನೆಕ್ಷನ್ ಕೊಡುವಂತೆ ಹಾಸ್ಟೆಲ್ ವಾರ್ಡನ್ ಮೂಲಕ ತಿಳಿಸಲಾಗಿದೆ. ನೀರನ್ನು ಶೇಖರಿಸಿ ಇಡಲು ಎರಡು ಸಿಂಟೆಕ್ಸ್ ಖರೀದಿಸುವಂತೆ ಸೂಚಿಸಿದ್ದೇನೆ. ಎಸ್ಟಿಪಿ ಬದಲಿ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಗೃಹ ಮಂಡಳಿಗೆ ಪತ್ರವನ್ನು ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಬೀದಿ ದೀಪ ವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸಲಾಗುವುದು. ನನ್ನ ಗಮನಕ್ಕೆ ಬಂದ ತಕ್ಷಣ ಬೀದಿ ದೀಪ ನಿರ್ವಹಿಸುತ್ತಿರುವವರಿಗೆ ಶೀಘ್ರವೇ 8 ಬೀದಿ ದೀಪಗಳನ್ನು ಹಾಕುವಂತೆ ತಿಳಿಸಿದ್ದೇನೆ. ಕುಡಿಯುವ ನೀರು ಪೂರೈಕೆಗೆ ಪಟ್ಟಣ ಪಂಚಾಯಿತಿಯಲ್ಲಿ ಅನುದಾನವಿಲ್ಲ. ಮಾರ್ಚ್ ತಿಂಗಳಾಗಿರುವುದರಿಂದ ಅನುದಾನದ ಕೊರತೆಯಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರು ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಮಡ್ಯಾರು ವಿದ್ಯಾರ್ಥಿ ನಿಲಯಕ್ಕೆ ವಿದ್ಯಾರ್ಥಿನಿಯರು ಕಗ್ಗತ್ತಲು ಆವರಿಸಿದ 500 ಮೀ ಉದ್ದದ ನಿರ್ಜನ ಪ್ರದೇಶದ ದಾರಿಯಲ್ಲಿ ಮೊಬೈಲ್ ಟಾರ್ಚ್ ಹಿಡಿದುಕೊಂಡೇ ತೆರಳುತ್ತಿದ್ದರು. ಮತ್ತೊಂದೆಡೆ ಕೆಂಪು ತೈಲ ಮಿಶ್ರಿತ ಹಾಸ್ಟೆಲ್ ಬಾವಿ ನೀರನ್ನೇ ಬಳಸಬೇಕಾದ ಅನಿವಾರ್ಯತೆ ಇತ್ತು. ಮತ್ತೊಂದೆಡೆ ವಠಾರವಿಡೀ ಶೌಚಾಲಯದ ನೀರು ತುಂಬಿಕೊಂಡ ಪರಿಣಾಮದಿಂದಾಗಿ ವಿದ್ಯಾರ್ಥಿಗಳಿಗೆ ನರಕ ದರ್ಶನವಾಗಿತ್ತು. ಈ ಬಗ್ಗೆ ವಿವರವಾದ ವರದಿ ಬಿತ್ತರಿಸಿದ ಬಳಿಕ ಇದೀಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.