ಮಂಗಳೂರು, ಜ 25 (DaijiworldNews/DB): ಬಿಜೆಪಿ ನೇತೃತ್ವದ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳ ಸುಳ್ಳು ಆಶ್ವಾಸನೆ ನೀಡಿ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ದ್ರೋಹ ಬಗೆದಿದೆ. ಹೀಗಾಗಿ ಕರಾವಳಿ ಮತ್ತು ಮಲೆನಾಡು ಭಾಗದ ಅಭಿವೃದ್ಧಿಗೆ ಒತ್ತು ನೀಡಿ ಶಾಂತಿಯುತ, ಪ್ರಗತಿಪರ ಹಾಗೂ ಸಮೃದ್ಧ ಪ್ರದೇಶ ನಿರ್ಮಾಣದ ಸಲುವಾಗಿ ಕರಾವಳಿ, ಮಲೆನಾಡು ಧ್ವನಿ ಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಜನವರಿ 25ರ ಬುಧವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾತ್ರೆ ಎರಡು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 5ರಂದು ಸುಳ್ಯದಿಂದ ಯಾತ್ರೆ ಆರಂಭವಾಗಲಿದೆ. ಯಾತ್ರೆಯ ಎರಡನೇ ಹಂತವು ಫೆಬ್ರವರಿ 16ರಿಂದ ಮಾರ್ಚ್ 10ರವರೆಗೆ ಪ್ರಾರಂಭವಾಗುತ್ತದೆ. ಉಭಯ ಪ್ರದೇಶಗಳ ಏಳಿಗೆಯ ಉದ್ದೇಶ ಹೊತ್ತು ಈ ಯಾತ್ರೆಯನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದರು.
ಈ ಪ್ರದೇಶಗಳಲ್ಲಿ, ಕೋಮು ದ್ವೇಷ, ಜಾತಿ, ಧರ್ಮ ಮತ್ತು ಇತರ ವಿಷಯಗಳ ಹೆಸರಿನಲ್ಲಿ ಧ್ರುವೀಕರಣದ ಮೂಲಕ ಮತಗಳನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜನರ ಭಾವನೆಗಳನ್ನು ಬಳಸಿಕೊಂಡ ಬಿಜೆಪಿಯ ಕೋಮು ಧ್ರುವೀಕರಣದ ವಿರುದ್ಧ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ಮತ ಗಳಿಸಲು ಪರೇಶ್ ಮೇಸ್ತಾ ಸಾವಿನಲ್ಲಿ ರಾಜಕೀಯ ಮಾಡಲಾಗಿದೆ. ಆದರೆ ಸಾವಿನಲ್ಲಿ ಪಿತೂರಿ ಶೂನ್ಯ ಎಂದು ಸಿಬಿಐ ವರದಿ ನೀಡಿದ ನಂತರ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹರಿಹಾಯ್ದರು.
ಬೆಂಗಳೂರಿನಂತೆ ಮಂಗಳೂರು ನಗರವನ್ನು ಐಟಿ ಹಬ್ ಆಗಿ ಮಾಡಬಹುದು. ನಗರದಲ್ಲಿ ಉತ್ತಮ ಸಾಮರ್ಥ್ಯವಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಹಿಂದುಳಿದ ಸೂಕ್ಷ್ಮ ಸಮುದಾಯಗಳನ್ನೂ ಬಿಜೆಪಿ ಹತ್ತಿಕ್ಕಿದೆ ಎಂದ ಅವರು, ಬಸವರಾಜ ಬೊಮ್ಮಾಯಿ ಅವರಂತಹ ಅದಕ್ಷ ಮುಖ್ಯಮಂತ್ರಿಯನ್ನು ಇಡೀ ದೇಶದ ಇತಿಹಾಸವೇ ಕಂಡಿಲ್ಲ ಎಂದು ಕಿಡಿ ಕಾರಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿದರು.