ಮೂಡುಬಿದಿರೆ, ಮಾ 12 (MSP): ಕಲೆಯ ಆರಾಧನೆಯ ಮೂಲಕ ಪ್ರಸಿದ್ಧಿಯಾಗಿರುವ ಮೂಡುಬಿದಿರೆ ಸಮೀಪದ ಹೊಸನಾಡು, ಕೊಡ್ಯಡ್ಕ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಳ ಕಳೆದ ಒಂದು ತಿಂಗಳಿನಿಂದ ಮತ್ತಷ್ಟು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದೇವಸ್ಥಾನದ ಆವರಣದಲ್ಲಿ ರೂಪು ತಾಳಿರುವ ‘ಸಮುದ್ರ ಮಥನ’ ಪರಿಕಲ್ಪನೆಯ, ಬ್ಯಾಂಕಕ್ ಮಾದರಿಯ ಕಲಾಕೃತಿ ದೇವಸ್ಥಾನಕ್ಕೆ ಬರುವ ದೇಶ-ವಿದೇಶದ ಭಕ್ತರನ್ನು, ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ.
ಥಾಯ್ ಸಂಸ್ಕೃತಿಯ ಮಾದರಿ:
ಥೈಲಾಂಡ್ ದೇಶದ ಬ್ಯಾಂಕಾಕ್ ಸುವರ್ಣಭೂಮಿ ಏರ್ಫೋರ್ಟ್ನಲ್ಲಿ ಥಾಯ್ ಸಂಸ್ಕೃತಿ ಶೈಲಿಯಲ್ಲಿ ಸಮುದ್ರಮಥನದ ಕಲಾಕೃತಿ ಇದ್ದು, ಪ್ರಪಂಚದಲ್ಲೇ ಅತೀ ಹೆಚ್ಚು ಸೆಲ್ಫಿ, ಫೋಟೋ ತೆಗೆಯುವ ಮಾದರಿಯಾಗಿ ಪ್ರಸಿದ್ಧಿಯಾಗಿದೆ. ಅದೇ ಮಾದರಿಯನ್ನು ಇಟ್ಟುಕೊಂಡು ಕೊಡ್ಯಡ್ಕ ಕ್ಷೇತ್ರದಲ್ಲಿ ಕಲಾಕೃತಿಯನ್ನು ರಚಿಸಲಾಗಿದೆ. ದೇಶದಲ್ಲಿ ‘ಥಾಯ್ ಶೈಲಿಯಲ್ಲಿ ರಚಿತಗೊಂಡಿರುವ ಸಮುದ್ರಮಥನದ ಮೊದಲ ಕಲಾಕೃತಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಭಾರತದ ಕೆಲವು ಭೌದ್ಧ ಮಂದಿರ, ದೇವಸ್ಥಾನಗಳಲ್ಲಿ ಥಾಯ್ ಶೈಲಿಯ ಮೂರ್ತಿಗಳು ಕಾಣಸಿಕ್ಕರೂ, ಇಡೀ ಸಮುದ್ರಮಥನದ ಚಿತ್ರಣವನ್ನು ನೀಡುವ ಸಧ್ಯ ಕಲಾಕೃತಿ ಕಾಣಸಿಗುವ ಏಕೈಕ ಸ್ಥಳ ಕೊಡ್ಯಡ್ಕ.
ಒರಿಸ್ಸಾದ ಕಲಾವಿದರಿಂದ ರಚನೆ:
ಕೊಡ್ಯಡ್ಕ ದೇವಳದ ಆಡಳಿತ ಮೊಕ್ತೇಸರ ಡಾ.ಜಯರಾಮ್ ಹೆಗ್ಡೆ ಅವರ ಪರಿಕಲ್ಪನೆಯಲ್ಲಿ, ಒರಿಸ್ಸಾದ ಕಲಾವಿದ ಬಸಂತ್ ಕುಮಾರ್ ನೇತೃತ್ವದ ಐದು ಮಂದಿ ಕಲಾವಿದರು2018ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕಲಾಕೃತಿಯನ್ನು ರಚಿಸಿದ್ದಾರೆ. ಒರಿಸ್ಸಾದಲ್ಲಿ ಮೂರ್ತಿ ಕಲಾಕೃತಿಯ ಪ್ರಾರಂಭಿಕ ಕೆಲಸ ಮಾಡಿ, ಬಳಿಕ ಕೊಡ್ಯಡ್ಕಕ್ಕೆ ಅದನ್ನು ತಂದು ಕಲಾವಿದರು ಅಂತಿಮ ಸ್ಪರ್ಶ್ಯ ನೀಡಿದ್ದಾರೆ. ರೂ.16 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಲಾಕೃತಿಯ 2019ರ ಜನವರಿ ತಿಂಗಳಲ್ಲಿ ಕೆಲಸ ಪೂರ್ಣಗೊಂಡಿದ್ದು, ಜನವರಿ 26ರಂದು ಲೋಕಾರ್ಪಣೆಗೊಂಡು, ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಕೊಡ್ಯಡ್ಕ ದೇವಳದ ಆವರಣದ ಮುಖ್ಯಧ್ವಾರದ ಬಳಿ ಸಮುದ್ರ ಮಥನದ ಕಲಾಕೃತಿ ಇದ್ದು, ದೇವಳಕ್ಕೆ ಬರುವವರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಮುದ್ರ ಮಥನ ಕಲಾಕೃತಿಯನ್ನು ರಚಿಸಿದ ಕಲಾವಿದರು, ಮುಖ್ಯಧ್ವಾರಕ್ಕೆ ಬರುವ ಸಂದರ್ಭದಲ್ಲಿ ನಟರಾಜನ ಬೃಹತ್ ಕಲಾಕೃತಿ ಹಾಗೂ ಕಲಾಕೃತಿಯ ಹಿಂಭಾಗದಲ್ಲಿ ಹನುಮಂತ ಸಂಜೀವಿನಿ ಪರ್ವತವನ್ನು ತರುವ ಸನ್ನಿವೇಶದ ಕಲಾಕೃತಿಯನ್ನು ರಚಿಸಿರುವುದು, ಫೋಟೋ ಫ್ರೇಮ್ ಮಾದರಿಯಲ್ಲಿ ಅದನ್ನು ಜೋಡಿಸಿರುವುದರಿಂದ ದೇವಸ್ಥಾನದ ಮುಖ್ಯಧ್ವಾರ ಪರಿಸರ ಕಲಾಕತ್ಮವಾಗಿ ಕಾಣುತ್ತದೆ.
ಎರಡು ವರ್ಷದ ಹಿಂದೆ ಕನ್ಯಾಕುಮಾರಿಯ ಕಲಾವಿದ ದಕ್ಷಿಣ ಮೂರ್ತಿ ರಚಿಸಿದ ಪುರಂದರ ದಾಸರ ಮೂರ್ತಿ, ಅದರ ಪಕ್ಕ ಅಮೃತಶಿಲೆಯಲ್ಲಿ ಪುರಂದರದಾಸರ ಕಿರುಪರಿಚಯ, ಆಯ್ದ ಕೀರ್ತನೆಗಳ ಸಾಲುಗಳನ್ನು ಅಳವಡಿಸಲಾಗಿದೆ. 2008ರಲ್ಲಿ ನಿರ್ಮಿಸಲಾದ 61 ಅಡಿ ಎತ್ತರ ಸಂಜೀವಿನಿ ಹನುಮಂತ ಪ್ರತಿಮೆ ದೇವಸ್ಥಾನದ ಅವರಣದ ಮೆರಗನ್ನು ಹೆಚ್ಚಿಸಿದೆ.2008ರ ಮೇ 5ರಂದು ಈ ಬೃಹತ್ ಪ್ರತಿಮೆಯನ್ನುಪೇಜಾವರ ಸ್ವಾಮೀಜಿ ಲೋಕಾರ್ಪಣೆ ಮಾಡಿದ್ದರು. ಹನುಮಂತ ಪ್ರತಿಮೆಯ ಪಕ್ಕ ಎರಡು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸಾಯಿಬಾಬ ಮಂದಿರ, ಅದರಲ್ಲಿರುವ ಬಿಳಿ ಅಮೃತಶಿಲೆಯಿಂದ ಕೆತ್ತಲಾದ ಸಾಯಿಬಾಬರ ಮೂರ್ತಿ ಕೂಡ ನೋಡುಗರನ್ನು ಸೆಳೆಯುತ್ತದೆ. ಪ್ರವೇಶ ಧ್ವಾರದಿಂದ ದೇವಸ್ಥಾನದ ಕಡೆಗೆ ಹೋಗುವಾಗ ಎಡಭಾಗದಲ್ಲಿರುವ ಈ ಕೆತ್ತನೆಗಳು, ಮಂದಿರವು ಕಲಾತ್ಮಕವಾಗಿರುವುದು ಮಾತ್ರವಲ್ಲ, ಆಧ್ಯಾತ್ಮದ ಅನುಭವನ್ನು ನೀಡುವಂತಿದೆ. ದೇವಸ್ಥಾನದ ಎದುರು ಕೂಡ ಅಕರ್ಷಕ ಕಲಾಕೃತಿಗಳಿವೆ.