ಬಂಟ್ವಾಳ,ಮಾ 12 (MSP): ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಹತ್ತೂರಿನಿಂದ ಭಕ್ತಜನಸಾಗರವೇ ಹರಿದು ಬರುತ್ತಿದೆ. ಇನ್ನೊಂದೆಡೆ ಪೊಳಲಿ ಬ್ರಹ್ಮಕಲಶೋತ್ಸವದಲ್ಲಿ 10 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ್ದಾರೆ. ಪಾರ್ಕಿಂಗ್ ಅನ್ನಛತ್ರ, ಉಗ್ರಾಣ, ಪ್ರಾಂಗಣ , ಸ್ವಚ್ಛತೆ ಕಾರ್ಯ ಸೇರಿದಂತೆ ಮತ್ತಿತರ ಕೆಲಸಗಳಲ್ಲಿ ಸ್ವಯಂ ಸೇವಕರು ಶೃದ್ಧೆ ಭಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳ್ಳತನವಾದ ಕಾರ್
ಆದರೆ ಪೊಳಲಿ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವೆಗೆ ಬಂದಿದ್ದ ಭಕ್ತಾಧಿಯೊಬ್ಬರ ಕಾರು, ನಡು ರಾತ್ರಿ ವೇಳೆಗೆ ಕಳ್ಳತನವಾಗಿ ಬೆಳಗ್ಗೆ ,ಕಳ್ಳತನವಾದ ಸ್ಥಳದ ಅಣತಿ ದೂರದಲ್ಲಿ ಪತ್ತೆಯಾದ ಘಟನೆ ಎಲ್ಲರನ್ನು ಅಚ್ಚರಿಗೀಡುಮಾಡಿದೆ. ಪೊಳಲಿ ಬ್ರಹ್ಮಕಲಶೋತ್ಸವದಲ್ಲಿ ಶನಿವಾರ ರಾತ್ರಿ ಕರಸೇವೆ ಸಲ್ಲಿಸಿ ಭಕ್ತರೊಬ್ಬರು ಭಾನುವಾರ ಮುಂಜಾನೆ 3.30ಕ್ಕೆ ಇನ್ನೇನು ಹೊರಡಬೇಕು ಎಂದಾಗ ಸ್ವಯಂಸೇವಕರ ಓಮ್ನಿ ಕಾರು ಪಾರ್ಕಿಂಗ್ ಸ್ಥಳದಿಂದ ಮಾಯವಾಗಿತ್ತು. ಕರಸೇವಕನ ಸ್ನೇಹಿತರು ಮತ್ತು ಇತರರು ಓಮ್ನಿ ಕಾರಿಗಾಗಿ ಪಾರ್ಕಿಂಗ್ ಪ್ರದೇಶವನ್ನು ಹಾಗೂ ಸುತ್ತಮುತ್ತ ಹುಡುಕಾಡಿ ಕಾರ್ ಎಲ್ಲೂ ಪತ್ತೆಯಾಗಿರಲಿಲ್ಲ.
ಕೊನೆಗೆ ಸಿಸಿ ಕ್ಯಾಮೆರಾ ಪೂಟೇಜ್ ಪರಿಶೀಲಿಸಿದಾಗ ಕಾರ್ ಕಳ್ಳತನವಾಗಿದ್ದು ಸ್ಪಷ್ಟವಾಗಿತ್ತು. ಕರಸೇವಕ ಈ ವಿಚಾರವನ್ನು ಭದ್ರತೆಗಾಗಿ ನಿಯೋಜಿಸಿದ ಪೊಲೀಸರಿಗೆ ತಿಳಿಸಿದಾಗ ಬೆಳಗಾಗುವರೆಗೆ ಕಾದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು.
ಕಾರು ಕಳಕೊಂಡ ಕರಸೇವಕ ನೊಂದು ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ಹೊರಟಾಗ, ತಾಯಿ ನೆಲೆನಿಂತ ಜಾಗದಲ್ಲಿ ಯಾರಿಗೂ ಅನ್ಯಾಯವಾಗದೆಂದು ಪುರೋಹಿತರ ಧೈರ್ಯದ ಮಾತುಗಳನ್ನು ಕೇಳಿ ವಾಪಾಸ್ ಆಗಿದ್ದರು.
ವಿಶೇಷ ಎಂದರೆ ಈ ಕರಸೇವಕನಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಪ್ರಮೇಯವೇ ಬಂದಿರಲಿಲ್ಲ. ಭಾನುವಾರ ಬೆಳಗ್ಗೆ ಸುಮಾರು 10.30ಕ್ಕೆ ಕಾರ್ ಪಾರ್ಕಿಂಗ್ ಮಾಡಿದ್ದ ಅನತಿ ದೂರದಲ್ಲಿಯೇ ಕಾರ್ ಮತ್ತೆ ಪ್ರತ್ಯಕ್ಷವಾಗಿತ್ತು. ಆದರೆ ಬ್ರಹ್ಮಕಲಶೋತ್ಸವದ ಸಮಯದಲ್ಲಿ ಕಳವಾದ ಕಾರು ವಾಪಸ್ ಅದೇ ಸ್ಥಳದಲ್ಲಿ ಪ್ರತ್ಯಕ್ಷವಾಗಿದ್ದು ಇದೇ ಮೊದಲನೆಯ ಪ್ರಕರಣವಾಗಿರಲಿಲ್ಲ . ಸ್ಥಳೀಯರ ಪ್ರಕಾರ ಇದು ಎರಡನೇಯ ಪ್ರಕರಣವಾಗಿತ್ತು. ಸ್ಥಳೀಯರೆಲ್ಲರೂ ಇದೀಗ ತಾಯಿ ರಾಜರಾಜೇಶ್ವರಿಯ ಶಕ್ತಿಯನ್ನು ಭಕ್ತಿಭಾವದಿಂದ ಕೊಂಡಾಡಿ ಈ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.