ಕಾರ್ಕಳ, ಮಾ 12 (MSP): ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದ ಎಎಸ್ಪಿಗೆ ಲಂಚದ ಆಮಿಷವೊಡ್ಡಿದ ಲಾರಿ ಮಾಲೀಕನಿಗೆ ಕಾರ್ಕಳ ಉಪವಿಭಾಗದ ಎಎಸ್ಪಿ ಲಾಠಿ ರುಚಿ ತೋರಿಸಿದ ಘಟನೆ ಮಾ.10 ರ ಭಾನುವಾರ ನಡೆದಿದೆ.
ಮರವೂರಿನಿಂದ ಕಾರ್ಕಳಕ್ಕೆ ಮರಳು ಸಾಗಿಸುತ್ತಿದ್ದಾಗ ಸಾಣೂರು ಬಳಿ ಕಾರ್ಕಳ ಎಎಸ್ಪಿ ಎಚ್. ಕೃಷ್ಣ ಕಾಂತ್ ಅವರು ಮರಳು ಲಾರಿಯನ್ನು ತಡೆದು ನಿಲ್ಲಿಸಿದರು. ತಕ್ಷಣವೇ ಸ್ವಿಫ್ಟ್ ಕಾರಿನಲ್ಲಿ ಸ್ಥಳಕ್ಕಾಗಮಿಸಿದ ಲಾರಿ ಮಾಲೀಕ ಲಾರಿಯನ್ನು ಬಿಟ್ಟು ಬಿಡಿ, ಅದಕ್ಕಾಗಿ ನಿಮಗೆ ಏನು ಕೊಡಬೇಕು ಹೇಳಿ ಎಂದಾಗ ಕೆಂಡಮಂಡಲರಾದ ಎಎಸ್ಪಿ ಮಾಲೀಕನನ್ನು ಠಾಣೆಗೆ ಕರೆದೊಯ್ದು ಲಾಠಿ ರುಚಿ ತೋರಿಸಿದ್ದಾರೆ. ಮಾತ್ರವಲ್ಲದೆ ಸಂಜೆ ತನಕವೂ ಆತನನ್ನು ಠಾಣೆಯಲ್ಲಿ ಕೂರಿಸುವ ಶಿಕ್ಷೆ ನೀಡಿದ್ದಾರೆ.
ಅಕ್ರಮವಾಗಿ ಮರಳುಗಾರಿಕೆ ಸಾಗಾಟ ನಡೆಸುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಎಎಸ್ಪಿಯವರು ಮಫ್ತಿಯಲ್ಲಿ ಖಾಸಗಿ ವಾಹನ ಪಡೆದು ತೆರಳಿದ್ದರು. ಹೀಗಾಗಿ ಮರಳು ಲಾರಿಯ ಬೆಂಗಾವಲು ವಾಹನಕ್ಕೆ ಎಎಸ್ಪಿಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಸ್ವತಃ ಪೊಲೀಸರಿಗೂ ಈ ಕುರಿತು ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ.