ಉಡುಪಿ, ಜ 23( DaijiworldNews/MS): ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಭಾರತ-ನೇಪಾಳ ಗಡಿಭಾಗದ ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಜಿತೇಂದ್ರ ಶಾರ್ಕಿ(26) ಬಂಧಿತ ಆರೋಪಿ.
ಈತ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಎರಡು ವರ್ಷಗಳಿಂದ ಜೀತೇಂದ್ರ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಅವರ ವಿರುದ್ಧ 16 ವಾರಂಟ್ ಮತ್ತು 3 ಅಟ್ಯಾಚ್ ವಾರೆಂಟ್ಗಳನ್ನು ಹೊರಡಿಸಲಾಗಿತ್ತು..
ಈತನ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ತಂಡದ ಸದಸ್ಯರಾದ ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ದೇವರಾಜ ಟಿ.ವಿ. ನಿರ್ದೇಶನದಂತೆ ಪಿಎಸ್ಐ ಅಬ್ದುಲ್ ಖಾದರ್, ಪಿಎಸ್ಐ ನಿಧಿ ಬಿ.ಎನ್., ಎಚ್ಸಿ ಥಾಮ್ಸನ್, ಸಿಬಂದಿ ದಿನೇಶ್ ಅವರ ಸಹಕಾರದೊಂದಿಗೆ ಸತತ ಒಂದು ವಾರಗಳ ಕಾಲ ಭಾರತ-ನೇಪಾಳ ಗಡಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಉತ್ತರಾಖಂಡ ರಾಜ್ಯದ ಬನ್ ಬಸಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗಡಿಕೋಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.