ಉಡುಪಿ, ಜ. 23 (DaijiworldNews/SM): ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ಬೆಂಗಳೂರಿನ ಹೋಟೇಲ್ ಉದ್ಯಮ ನಡೆಸುತ್ತಿದ್ದ ರಾಜೇಶ ಪೂಜಾರಿ ರವರ ಮನೆಯಲ್ಲಿ 2022 ಸಾಲಿನ ಸೆಪ್ಟಂಬರ್ ತಿಂಗಳಿನಲ್ಲಿ ರಾತ್ರಿ ಕಳ್ಳರು ಮನೆಯ ಬಾಗಿಲು ಒಡೆದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ರವರ ಆದೇಶದಂತೆ ಬ್ರಹ್ಮಾವರರವರ ಸಿಪಿಐ ಅನಂತಪದ್ಮನಾಭ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಸದ್ರಿ ತಂಡದಲ್ಲಿನ ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಈ, ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಈ, ಕೋಟ ಸಿಬ್ಬಂದಿಯವರಾದ ಪ್ರದೀಪ ನಾಯಕ್, ರಾಘವೇಂದ್ರ, ಪ್ರಸನ್ನ ಬ್ರಹ್ಮಾವರ ಠಾಣಾ ಸಿಬ್ಬಂದಿ ವೆಂಕಟರಮಣ ದೇವಾಡಿಗ, ರವರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನ ಮೇಲೆ ನಿಗಾ ಇರಿಸಿ, ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮೇರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳ ಮೇಲೆ ನಿಗಾವಹಿಸಿರುತ್ತಾರೆ.
ದಿನಾಂಕ 22-01-2023 ರಂದು ಕೋಟ ಠಾಣಾ ಸರಹದ್ದಿನ ಸಾಯಬರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಿಶೇಷ ತಂಡವು ಆರೋಪಿ ಪತ್ತೆಯ ಬಗ್ಗೆ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಬಂದ ಪೋರ್ಡ್ ಮಾಂಡಿಯೋ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್ ರಿಯಾಜ್ ಹೊಸ್ಮಾರ್ @ ರಿಯಾಜ್ ಎಂಬುವವರಿದ್ದು ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ 2022 ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಸಾಸ್ತಾನದ ಚರ್ಚ್ ಬಳಿ ಒಂದು ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳಾಗಿರುವುದಾಗಿ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು.
ಈ ಆರೋಪಿಗಳಿಂದ ಕಳ್ಳತನ ನಡೆಸಿದ ಸುಮಾರು 15 ಲಕ್ಷದ ಚಿನ್ನಾಭರಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಪೋರ್ಡ್ ಮಾಂಡಿಯೋ ಕಾರು, ಸುಮಾರು 1 ಲಕ್ಷ ಮೌಲ್ಯದ ಹಿರೋ ಕಂಪೆನಿಯ ಡೆಸ್ಟೀನಿ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 50000 ಸಾವಿರ ಮೌಲ್ಯದ ಹೊಂಡಾ ಆ್ಯಕ್ಟೀವ್ ಮೋಟಾರ್ ಸೈಕಲ್ ಆರೋಪಿಗಳಿಂದ ಸ್ವಾಧೀನ ಪಡಿಸಲಾಗಿರುತ್ತದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 19 ಲಕ್ಷ ಆಗಿರುತ್ತದೆ.