ಬಂಟ್ವಾಳ, ಜ. 21 (DaijiworldNews/SM): ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯಚಂದ್ರರು ಇರುವಷ್ಟೇ ಸತ್ಯ, ಕಾಂಗ್ರೇಸನ್ನು ರಾಜ್ಯದಲ್ಲಿ ಮಾತ್ರ ಅಲ್ಲ, ಇಡೀ ದೇಶದ ಜನತೆಯೇ ಕಿತ್ತೊಗೆಯುವ ಸಂಕಲ್ಪ ತೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿಯ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ ೧೦ನೇ ದಿನದ ಪಾದಯಾತ್ರೆಯ ಬಳಿಕ ಕೊಯಿಲದಲ್ಲಿ ಶ್ರೀ ದೇವಪ್ಪ ಶೆಟ್ಟಿ ಮಾವಂತೂರು ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕಾರದಿಂದ ಹೊರ ಬಿದ್ದಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದ್ದು, ರಾಜ್ಯದ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟು ಇದೀಗ ಪ್ರಜಾ ಧ್ವನಿ ಯಾತ್ರೆಯ ನಾಟಕ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪ್ರಧಾನಿ ಮೋದಿಯವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡದೆ ಭಾರತವನ್ನು ಜಗತ್ತಿನ ಯಾವುದೇ ದೇಶದ ಮುಂದೆ ತಲೆ ಭಾಗದ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕರಾವಳಿಗೆ ಅವಿನಾಭಾವ ಸಂಬಂಧವಿದ್ದು, ಅದರ ಪರಿಣಾಮವಾಗಿಯೇ ಬಂಟ್ವಾಳಕ್ಕೆ ಸಾವಿರ ಕೋ.ರೂ.ಗಳಿಗೆ ಮಿಕ್ಕಿದ ಅನುದಾನ ನೀಡಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಅನಿರೀಕ್ಷಿತವಾಗಿ ಚುನಾವಣೆಗೆ ಬಂದು ಪರಾಭವಗೊಂಡರೂ ಎಲ್ಲಾ ಜಾತಿ, ಧರ್ಮದ ಜನರ ವಿಶ್ವಾಸ ಗಳಿಸಿದ ಪರಿಣಾಮ ಗೆದ್ದು ಬಂದಿದ್ದಾರೆ. ಪ್ರಸ್ತುತ ಬಂಟ್ವಾಳದಲ್ಲಿ ಅವರ ಸಾಧನೆಯೇ ಮಾತನಾಡುತ್ತಿದೆ. ದೇಶದಲ್ಲಿ ರಕ್ಷಣಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧಿಸಬೇಕು ಎಂದು ಪ್ರಧಾನಿ ಹಗಲಿರುಳು ಶ್ರಮಿಸುತ್ತಿದ್ದು, ಅವರು ಅಧಿಕಾರಕ್ಕೇರಿದ ಸಂದರ್ಭದಲ್ಲಿ ಕೇವಲ ೭೦ ಸಾವಿರ ಕಿ.ಮೀ. ಇದ್ದ ಹೆದ್ದಾರಿಯನ್ನು ೨ ಲಕ್ಷ ಕಿ.ಮೀ.ಏರಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ೧.೬೫ ಲಕ್ಷ ಕಿ.ಮೀ.ಹೆದ್ದಾರಿ ಅಭಿವೃದ್ಧಿಗೊಂಡಿದೆ.
ಮನೆ ಮನೆಗೆ ಗಂಗೆ ಯೋಜನೆಯಲ್ಲಿ ೩೫.೫೦ ಲಕ್ಷ ಮನೆಗಳಿಗೆ ನಳ್ಳಿಗಳನ್ನು ಅಳವಡಿಕೆ ಮಾಡಲಾಗಿದ್ದು, ಪಿಎಂ ಕಿಸಾನ್ ಸಮ್ಮಾನ್ ೫೦ ಲಕ್ಷ ಕುಟುಂಬಗಳಿಗೆ ತಲುಪಿದೆ.
ರಾಹುಲ್ ಗಾಂಧಿ ಅವರು ಕಾಲಿಟ್ಟ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದ್ದು, ಅವರ ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ ಅಧಃಪತನಕ್ಕೆ ತಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದ ಅವರು,. ಮುಂದಿನ ಲೋಕಸಭಾ ಚುನಾವಣೆಯಲ್ಲಿ ೨೫-೨೬ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕಾದರೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದು ಅನಿವಾರ್ಯವಾಗಿದೆ ಎಂದರು.
ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಮಾತನಾಡಿ, ಕೇರಳದಲ್ಲಿ ಅಧಿಕಾರದಲ್ಲಿರುವ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಕೇರಳ ರಾಜ್ಯದ 280 ಮಂಡಲಗಳಲ್ಲಿಯೂ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ,ರಾಜಕೀಯಕ್ಕೆ ತನ್ನದು ಅನಿರೀಕ್ಷಿತ ಪ್ರವೇಶ, 1989 ರಲ್ಲಿ ಸ್ಪರ್ಧಿಸಲು ಅವಕಾಶ ಇತ್ತಾದರೂ ನಿರಾಕರಿಸಿದೆ, ಪಕ್ಷದ ಹಿರಿಯ ಒತ್ತಾಯದ ಹಿನ್ನೆಲೆಯಲ್ಲಿ 2014 ರಿಂದ ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡದ್ದೇನೆ, ಕ್ಷೇತ್ರದ ಪ್ರಗತಿ,ಶಾಂತಿ,ಜನತೆಯ ಪ್ರೀತಿ ಖುಷಿಕೊಟ್ಟಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ನಗರ ನೀರು ಸರಬರಾಜು- ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜೆ.ಕೆ.ಭಟ್, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಪಾದಯಾತ್ರೆಯ ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ್ ಬಜ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ರಾಯಿ ಗ್ರಾ.ಪಂ.ಅಧ್ಯಕ್ಷೆ ರತ್ನಾ ಆನಂದ್, ಮಂಡಲಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಉಪಸ್ಥಿತರಿದ್ದರು.
ಪಾದಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು. ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ವಂದಿಸಿದರು.