Karavali
ಕಾರ್ಕಳ: 'ಬಿಜೆಪಿ ಅಂದು ಮಾಡಿದ ಅವಮಾನ ಎಂದೂ ಮರೆಯಲ್ಲ' -ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಮುತಾಲಿಕ್ ಘೋಷಣೆ
- Mon, Jan 23 2023 04:09:28 PM
-
ಕಾರ್ಕಳ, ಜ 23 (DaijiworldNews/HR): ಸಾವಿರಾರು ಹಿಂದೂ ಕಾರ್ಯಕರ್ತರ ನೋವಿನ ಧ್ವನಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾರ್ಕಳದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅನೇಕ ತಿಂಗಳುಗಳಿಂದ 12 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು ವರದಿ ಸಲ್ಲಿಸಿದ್ದಾರೆ . ಆ ಕ್ಷೇತ್ರಗಳ ಪೈಕಿ ಕಾರ್ಕಳವನ್ನೇ ಅಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೋಕಳ್ಳತನ ಕಾರ್ಕಳ ಕ್ಷೇತ್ರದಲ್ಲೆ ನಡೆಯುತ್ತಿದೆ. ಇಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ರೌಡಿ ಶೀಟರ್ ಕೇಸುಗಳು ದಾಖಲಾಗಿವೆ ಹಿಂದೂ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದರು.
2004ರಲ್ಲಿ ಸಚಿವ ಸುನೀಲ್ ಕುಮಾರ್ ಕಲ್ಲು ಕೋರೆ ವಿರುದ್ದ ಹಾಗೂ ಸುಚೇತ ಕೊಲೆ ಪ್ರಕರಣಗಳ ಬಗ್ಗೆ ಹೋರಾಟ ಮಾಡಿ ಬಂದವರು. ಆದರೆ ಆ ಕುಟುಂಬಕ್ಕೆ ನ್ಯಾಯವೆ ಸಿಕ್ಕಿಲ್ಲ. ಅಪರಾದಿಗಳನ್ನು ಹಿಡಿಯಲು ಅವರಿಂದ ಅಗಿಲ್ಲ. ಅ ಮೂಲಕ ಹಿಂದುತ್ವದ ಮೂಲ ಸಿದ್ದಾಂತವನ್ನು ಮರೆತಿದ್ದಾರೆ. ಈಗಾಗಲೇ ಕಾರ್ಕಳ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರ ವಿರೋಧಿ ಹೋರಾಟ ಹಾಗೂ ಹಿಂದುತ್ವವೆ ನನ್ನ ಮೂಲ ಧ್ಯೇಯವಾಗಿದೆ ಎಂದಿದ್ದಾರೆ.
ಇನ್ನು ನನಗೆ ಬಿಜೆಪಿ ಹಾಗೂ ಅದರ ಸಿಧ್ಧಾಂತದ ಬಗ್ಗೆ ವಿರೋಧ ವಿಲ್ಲ ಪ್ರಧಾನಿ ಮೋದಿ ಹಾಗೂ ಯೋಗಿಯ ಮೇಲೆ ನನಗೆ ಅಪಾರ ನಂಬಿಕೆಯಿದೆ ಆದರೆ ಬಿಜೆಪಿಯ ರಾಜ್ಯ ನಾಯಕರುಗಳ ವಿರುದ್ಧ ನನ್ನ ಅಸಮಾಧಾನ ವಿದೆ. ಹಿಂದುತ್ವದ ಮೂಲವನ್ನು ಮರೆತು ವಿಕೃತಿ ಕಡೆಗೆ ಕೊಂಡೊಯ್ಯುತ್ತಿದ್ದಾರೆ, ಕೆಲವು ಬಿಜೆಪಿ ನಾಯಕರುಗಳು 2014 ರಲ್ಲಿ ನನ್ನನ್ನು ಬಿಜೆಪಿಗೆ ಸೇರಿಸಿಕೊಂಡು ಸಂಜೆಯವೇಳೆಗೆ ಉಚ್ಚಾಟಿಸಿ ಅವಮಾನಮಾಡಿದ್ದಾರೆ ಎಂದರು.
ಬಿಜೆಪಿಗೆ ಪ್ರಾಮಾಣಿಕತೆ ಇದ್ದಲ್ಲಿ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ನಿಲ್ಲಿಸದೆ ನನಗೆ ಬೆಂಬಲ ಕೊಡಲಿ, ಆದರೆ ಬಿಜೆಪಿಯ ಟಿಕೆಟ್ ಅನ್ನು ನಾನು ಎಂದಿಗೂ ಸ್ವೀಕಾರ ಮಾಡುವುದಿಲ್ಲ. ರೌಡಿ ಶೀಟರ್ ಕೇಸ್ ಹಾಕಿಸಿಕೊಂಡ ಕಾರ್ಯಕರ್ತರು ಕಾರ್ಕಳದಲ್ಲಿಯೆ ಹೆಚ್ಚಾಗಿದ್ದಾರೆ ಅವರ ನೋವಿಗೆ ನಾನು ಮೊದಲು ದ್ವನಿಯಾಗಬೇಕಾಗಿದೆ. ಹೆಬ್ರಿಯ ತಾಲೂಕಿನ ಅನೇಕ ಕಡೆಗಳಲ್ಲಿ ಇಂದಿಗೂ ರಸ್ತೆಯೆ ಮರಿಚಿಕೆಯಾಗಿದೆ ಮೂಲ ಸೌಕರ್ಯಗಳೆ ಇಲ್ಲವಾಗಿದೆ ಅದರಿಂದಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಲ್ಲೆ ಸ್ಪರ್ಧಿಸುತಿದ್ದೇನೆ ಎಂದಿದ್ದಾರೆ.
ಬಿಜೆಪಿಯನ್ನು ಬೆಳೆಸಿದ ಹಿಂದುವಾದಿಗಳು, ಭಜರಂಗದಳ, ಹಿಂದುಜಾಗರಣ ವೇದಿಕೆ, ಆರ್ಎಸ್ಎಸ್ ಕಾರ್ಯಕರ್ತರು, ಶ್ರೀರಾಮ ಸೇನೆ ಕಾರ್ಯಕರ್ತರು, ಗೋಮಾತೆಯ ರಕ್ಷಕರು ಇಂದಿನ ಬಿಜೆಪಿ ನಾಯಕರ ವಿರುದ್ಧ ಭ್ರಮನಿರಸನರಾಗಿದ್ದಾರೆ ಆದ್ದರಿಂದ ನನಗೆ ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.
ಸಚಿವ ಸುನೀಲ್ ಕುಮಾರ್ ಹಾಗೂ ಮುತಾಲಿಕ್ ಗುರುಶಿಷ್ಯ ಸಂಬಂಧ ಬಗ್ಗೆ ಮಾತನಾಡಿದ ಮುತಾಲಿಕ್ ನನಗೆ ಸಚಿವ ಸುನೀಲ್ ಕುಮಾರ್ ಶಿಷ್ಯ ಎಂದು ಹೇಳಲು ನನಗೆ ಅಂಜಿಕೆ ಯಾಗುತ್ತಿದೆ, 2004 ರ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಸಚಿವ ಸುನೀಲ್ ಕುಮಾರ್ ಅವರ ಮೇಲೆ ಅಭಿಯಾನ ವಿತ್ತು, ದತ್ತಪೀಠದ ಹೋರಾಟ ಮೂಲಕ ಮೇಲೆ ಬಂದ ವ್ಯಕ್ತಿ ಶಾಸಕ ನಾಗುವ ಮೂಲಕ ಕಾರ್ಕಳದಲ್ಲಿ ಹಿಂದುತ್ವದ ವೈಭವವಿರುತ್ತೆ ಎಂದು ಸಂತಸ ತಂದಿತ್ತು. ಸುನೀಲ್ ಒಬ್ಬ ಡೋಂಗಿ ಹಿಂದುತ್ವವಾದಿ, ಆದರೆ ಕಾಲ ಕಳೆದಂತೆ ಮೂಲ ಹಿಂದುತ್ವ ಮರಿಚಿಕೆಯಾಗುತ್ತಾ ಸಾಗಿದೆ ಆ ಮೂಲಕ ಗುರುವಿನ ಮೂಲಕ ಶಿಷ್ಯನನ್ನು ತಿದ್ದಬೇಕಾಗಿದೆ ಮೂಲ ಸಿದ್ಧಾಂತವನ್ನು ನೆನಪಿಸಬೇಕಾಗಿದೆ ಅವರನ್ನು ಸೋಲಿಸಲೆ ಬೇಕು ಸ್ಪರ್ಧೆ ನಿಶ್ಚಿತವಾಗಿದೆ, ಗುರುವಿನ ಮೇಲೆ ಗೌರವ ವಿದ್ದಲ್ಲಿ ಶಿಷ್ಯ ಹಿಂದೆ ಸರಿಯಲಿ ಎಂದು ಸಚಿವ ಸುನೀಲ್ ಕುಮಾರ್ ಗೆ ಟಾಂಗ್ ನೀಡಿದರು.
ಚುನಾವಣೆ ಗೆಲ್ಲಲು ಹಣಬಲದ ಅವಶ್ಯಕತೆ ಇದೆ ನಿಜ ಅದಕ್ಕಾಗಿ ಭಿಕ್ಷೆ ಬೇಡಲು ಸಿಧ್ಧ ನಾನೊಬ್ಬ ಸನ್ಯಾಸಿ , ನನ್ನಲ್ಲಿ ಬ್ಯಾಂಕ್ ಖಾತೆ , ಮನೆ , ಯಾವುದು ಇಲ್ಲಾ ಆದರೆ ಹಿಂದು ಕಾರ್ಯಕರ್ತರೆ ನನ್ನ ಆಸ್ತಿ, ನನಗೆ ಪ್ರಮಾಣಿಕತೆ ಬೇಕು ಗೆಲ್ಲಿಸಿ, ದುಡ್ಡು ದೇಣಿಗೆ ಹಾಗೂ ಮನೆಬಾಗಿಲಿಗೆ ಹೋಗಿ ಭಿಕ್ಷೆ ಬೇಡಲು ಸಿದ್ದ ಎಂದರು.
ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಲವ್ ಜಿಹಾದ್ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದ ಮುತಾಲಿಕ್ ಲವ್ ಜಿಹಾದ್ ನ ವಿರುದ್ದ ಮೊದಲು ಗುಡುಗಿದ್ದೆ ಶ್ರಿರಾಮಸೇನೆ, ಲವ್ ಜಿಹಾದ್ ಸತ್ಯ, ಆದರೆ ಅದರ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿಕೆ ಗಳು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯೆ ನಿದರ್ಶನ, ನೆಟ್ಟರು ಕೊಲೆಯಾದಾಗ ಉಂಟಾದ ಕಾರ್ಯಕರ್ತರ ಆಕ್ರೋಶವೆ ಸಾಕು ಅವರು ಕನ್ನಡಿ ಎದುರು ನಿಂತು ಒಮ್ಮೆ ಅವಲೊಕನ ಮಾಡಿಕೊಳ್ಳಲಿ ಎಂದು ಮುತಾಲಿಕ್ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಉಲ್ಲೇಖಿಸಿದರು.ಕರಾವಳಿ ಯಲ್ಲಿ ಜಾತಿ ದುಡ್ಡು ಮೀರಿ ಹಿಂದುತ್ವ ಅಲೆಯಿದೆ . ಜಾತಿ ಮುಖ್ಯ ಅಲ್ಲಾ , ಅಭಿವೃದ್ಧಿ ಎನ್ನುವುದು ಕೇವಲ ರಸ್ತೆ ಅಲ್ಲ. ಆ ರಸ್ತೆ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಅದರೆ ಸಚಿವ ಸುನೀಲ್ ಕುಮಾರ್ ಕೇವಲ ಲೇಬಲ್ ಅಷ್ಟೇ ಎಂದು ಸುನೀಲ್ ಕುಮಾರ್ ಅವರನ್ನು ಕುಟುಕಿದರು.
ನನಗೆ ಸ್ಪರ್ಧೆ ಇರುವುದು ಡೋಂಗಿ ಹಿಂದುತ್ವ, ಸ್ವಾರ್ಥಿಗಳ ವಿರುದ್ದ ಆದರೆ ಹಿಂದುತ್ವ ಉಳಿಬೇಕಾದರೆ ಕಾಂಗ್ರೆಸ್ ಕೂಡ ನನಗೆ ಬೆಂಬಲನೀಡಿದರೆ ಪಡೆದುಕೊಳ್ಳಲು ಸಿದ್ದ ಎಂದಿದ್ದಾರೆ.ಮೂರು ಸಾವಿರ ಓಟುಗಳ ಪಡೆದುಕೊಳ್ಳಲು ಮುತಾಲಿಕ್ ಶಕ್ತರಾಗಿದ್ದಾರೆ ಎಂದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಹೇಳಿಕೆಗೆ ತಿರುಗೇಟು ನೀಡಿದ ಮುತಾಲಿಕ್ ನಾನು ಕಾರ್ಕಳಕ್ಕೆ ಬರುವ ಮೊದಲೇ ಮೂರುಸಾವಿರ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ ಎಂದರೆ ಹಿಂದು ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದೆ ಅರ್ಥ .ಹಾಗಾದರೆ ಸ್ಪರ್ಧಿಸಿದ ಬಳಿಕ ನನ್ನ ಗೆಲುವಿಗೆ ಅವರೆ ಮುನ್ನುಡಿ ಬರೆಯುತಿದ್ದಾರೆ ನೋಡಿ ಎಂದರು .
ಇನ್ನು ಕಾರ್ಕಳದಲ್ಲಿ 5ನೇ ತಾರೀಕಿನಿಂದ ಕಾರ್ಯಾಲಯ ಉದ್ಘಾಟನೆಯಾಗಲಿದ್ದು ಕಲ್ಬುರ್ಗಿಯ ಸಿದ್ದಲಿಂಗ ಸ್ವಾಮೀಜಿ, ಧಾರವಾಡದ ಆಶ್ರಮದ ಪರಮಾತ್ಮ ಸ್ವಾಮೀಜಿ ಸೇರಿದಂತೆ ಎಂಟಕ್ಕು ಹೆಚ್ಚು ಸ್ವಾಮೀಜಿಗಳು ಭಾಗವಹಿಸಿ ಗೋಪೂಜೆ, ಕಾರ್ಯಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅದಕ್ಕಾಗಿ ಒಂದು ಸಾವಿರ ಕಾರ್ಯಕರ್ತರು ಉಳಿದುಕೊಳ್ಳಲು ಅನುವಾಗುವಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರಿರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಕೀಲ ಹರೀಶ್ ಅಧಿಕಾರಿ, ಜಯರಾಂ, ಸುಧೀರ್ ಹೆಬ್ರಿ ಬೆಂಗಳೂರು ಶ್ರೀರಾಮ ಸೇನೆಯ ಸುಂದರೇಶ್ ಮೊದಲಾದವರು ಉಪಸ್ಥಿತರಿದ್ದರು.