ಕುಂದಾಪುರ, ಜ 23( DaijiworldNews/MS): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ ಭಾನುವಾರ ರಾತ್ರಿ ಸಿಮೆಂಟ್ ತುಂಬಿದ ಕಂಟೈನರ್ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡು ಮೂರು ಗಂಟೆಗಿಂತಲೂ ಹೆಚ್ಚು ಸಂಚಾರ ವ್ಯತ್ಯಯಗೊಂ ಘಟನೆ ನಡೆದಿದೆ.
ಕೊಪ್ಪಳದಿಂದ ಸುಮಾರು 50 ಟನ್ ಗಿಂತಲೂ ಹೆಚ್ಚು ಸಿಮೆಂಟ್ ತುಂಬಿದ್ದ ಕಂಟೈನರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಯಾರ್ಡ್ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ ಜಂಕ್ಷನ್ ನಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿಯಾಗಿ, ಸಿಸಿ ಕೆಮೆರಾ ಅಳವಡಿಸಲಾಗಿದ್ದ ಕಂಬವನ್ನು ಮುರಿದುಕೊಂಡು ಇನ್ನೊಂದು ಬಲಬದಿಯ ಹೆದ್ದಾರಿಗೆ ಅಡ್ಡವಾಗಿ ಮಗುಚಿಬಿದ್ದಿದೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ, ಕಾರೂ ಜಖಂಗೊಂಡಿದೆ. ಕಂಟೈನರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ನಿದ್ರಿಸುತ್ತಿದ್ದ ಎನ್ನಲಾಗಿದೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮೂರು ಕ್ರೇನ್ ಗಳ ಸಹಾಯದಿಂದ ಮೇಲಕ್ಕೆತ್ತಲಾಯಿತು. ಕುಂದಾಪುರ ಸಂಚಾರಿ ಪೊಲೀಸರು ಸ್ಥಳದಲ್ಲಿ ವಾಹನ ಸಂಚಾರ ಮತ್ತು ಜನರನ್ನು ನಿಯಂತ್ರಿಸಿದರು.
ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.