ಉಡುಪಿ, ಜ 22 (DaijiworldNews/DB): ಹಿಂದೂ ಮತ್ತು ಹಿಂದುತ್ವ ಬೇರೆ ಬೇರೆ ಪದಗಳು. ಹಿಂದುತ್ವ ಶಬ್ದವನ್ನು ಹುಟ್ಟು ಹಾಕಿದವರೇ ಸಾವರ್ಕರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾ ಧ್ವನಿ ಕಾರ್ಯಕ್ರಮದ ಅಂಗವಾಗಿ ಉಡುಪಿಗೆ ಆಗಮಿಸಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಎಂಬ ಶಬ್ದವನ್ನು ಅವರೇ ಹುಟ್ಟು ಹಾಕಿದ್ದರು ಎಂದರು.
ಕರಾವಳಿ ಹಿಂದುತ್ವದ ಲ್ಯಾಬೋರೇಟರಿ. ಬಿಜೆಪಿಯವರ ಕೆಲಸವೇ ಸುಳ್ಳು ಹರಡುವುದು. ಹಿಂದುತ್ವದ ಹೆಸರಿನಲ್ಲಿ ಸುಳ್ಳು ಹೇಳುವುದು, ಮನುವಾದ ಮಾಡುವವರು ನಮಗೆ ಆಗಿ ಬರುವುದಿಲ್ಲ. ನಾವು ಮನುಷ್ಯರನ್ನು ಪ್ರೀತಿಸುತ್ತೇವೆ. ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರೂ ಮನುಷ್ಯರೇ ಎಂದ ಅವರು, ಭಯೋತ್ಪಾದನೆ ಕೃತ್ಯಗಳನ್ನು ನಾವು ಯಾವಾಗಲೂ ಖಂಡಿಸುತ್ತೇವೆ. ಅಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರತಿಪಾದಿಸಿದರು.
ಅಭಿವೃದ್ದಿ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ. ಆ ಪಕ್ಷದವರಿಗೆ ಅಭಿವೃದ್ದಿಯಲ್ಲಿ ನಂಬಿಕೆಯಾಗಲೀ, ಆಸಕ್ತಿಯಾಗಲೀ ಇಲ್ಲ. ಹೀಗಾಗಿ ಕರಾವಳಿಯಾಗಲೀ, ರಾಜ್ಯ, ದೇಶವಾಗಲೀ ಅಭಿವೃದ್ದಿ ಮಾಡುವುದು ಅವರಿಂದ ಅಸಾಧ್ಯ. ಸ್ವಲ್ಪ ದಿನ ಮೆರೆದ ಹಿಟ್ಲರ್ ಕತೆ ಏನಾಯಿತು, ಮುಸಲೋನಿ, ಫ್ರ್ಯಾಂಕೋ ಏನಾದರು? ಎಲ್ಲದಕ್ಕೂ ಸಮಯ ಎಂಬುದಿರುತ್ತದೆ. ಜನ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಹರಿಹಾಯ್ದರು.
ದೇಶದ ಪ್ರಧಾನಿಯಾಗಿ ಮೋದಿ ರಾಜ್ಯಕ್ಕೆ ಬರಬಹುದೇ ಹೊರತು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆಂದು ಬಂದರೆ ಅದು ಅಸಾಧ್ಯದ ಮಾತು. 100 ಬಾರಿ ಕರ್ನಾಟಕಕ್ಕೆ ಅವರು ಬಂದು ಹೋದರೂ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಬಿಜೆಪಿ ಮೇಲೆ ರಾಜ್ಯದ ಜನ ಭ್ರಮನಿರಸನಗೊಂಡಿದ್ದಾರೆ ಎಂದರು.
ಅಮಿತ್ ಶಾ ಹಲವು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಅವರಿಂದ ಸಾಧ್ಯವಾಯಿತೇ? ಕರ್ನಾಟಕಕ್ಕೆ ಬಂದರೂ ಅವರಿಗೆ ಅದೇ ಗತಿಯಾಗುತ್ತದೆ ಎಂದವರು ಹೇಳಿದರು.
ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ಪಕ್ಷದವರು ಹುಡುಕುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಕೋಲಾರದಿಂದಲೇ ಸ್ಪರ್ಧಿಸುವ ತೀರ್ಮಾನವನ್ನು ನಾನು ಮಾಡಿದ್ದೇನೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು ಎಂದರು.
ರಾಜ್ಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 130, ಗರಿಷ್ಠ 150 ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ. ಉಡುಪಿಯಲ್ಲಿ ಎರಡು ಅಥವಾ ಮೂರು ಕ್ಷೇತ್ರ, ದಕ್ಷಿಣ ಕನ್ನಡದಲ್ಲಿ ಕನಿಷ್ಠ ಐದು ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸುವುದು ನಿಶ್ಚಿತ. ಬಿಜೆಪಿಯವರು ಒಮ್ಮೆ ಗೆಲುವು ಸಾಧಿಸಿದರೆಂದು ಮತ್ತೆ ಮತ್ತೆ ಅವರದೇ ಗೆಲುವು ಎನ್ನಲು ಸಾಧ್ಯವಿಲ್ಲ ಎಂದವರು ತಿಳಿಸಿದರು.