ಕಾಸರಗೋಡು, ಜ 22 (DaijiworldNews/HR): ಇತ್ತೀಚಿಗೆ ನಡೆದ ಮುಷ್ಕರದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ವ್ಯಾಪಕ ಹಾನಿಯನ್ನು ವಸೂಲಿ ಮಾಡಲು ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು, ಕಂದಾಯ ಅಧಿಕಾರಿಗಳ ಜತೆ ಸೇರಿ ಪಿಎಫ್ಐ ಮುಖಂಡರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ವಶಪಡಿಸಿಕೊಳ್ಳಲಿರುವ ಆಸ್ತಿಗಳ ಬಗ್ಗೆ ರಾಜ್ಯ ಕಂದಾಯ ಆಯುಕ್ತರಿಗೆ ಸಂಪೂರ್ಣ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅದರಂತೆ ಜಿಲ್ಲೆಯ ಐವರು ಪಿಎಫ್ಐ ಮುಖಂಡರ ಆಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.
ಜಿಲ್ಲಾ ಪಿಎಫ್ಐ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಗಿರಿ ಚಾರಿಟೇಬಲ್ ಟ್ರಸ್ಟ್ನ ಜಮೀನು ಮತ್ತು ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಜತೆಗೆ ಪಿಎಫ್ಐ ಮುಖಂಡರಾದ ಮೀಂಜದ ಮಹಮ್ಮದ್ ಅಲಿ, ನಾಯಮ್ಮರಮೂಲೆಯ ಎನ್ ಯು ಅಬ್ದುಲ್ ಸಲಾಂ, ಆಲಂಪಾಡಿಯ ಉಮ್ಮರ್ ಫಾರೂಕ್, ಹೊಸದುರ್ಗ ತಾಲೂಕಿನ ನಂಜರತ್ ಸಿರಾಜುದ್ದೀನ್, ತ್ರೆಕ್ಕೇರಿಪುರ ಗ್ರಾಮದ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಸಿ ಟಿ ಸುಲೈಮಾನ್ ಅವರ ಆಸ್ತಿ ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಪಿಎಫ್ಐ ಮುಖಂಡರನ್ನು ಎನ್ಐಎ ಬಂಧಿಸಿರುವುದನ್ನು ವಿರೋಧಿಸಿ 2022ರ ಸೆಪ್ಟೆಂಬರ್ 22ರಂದು ಪಿಎಫ್ಐ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿತ್ತು. ಮುಷ್ಕರ ಕರೆ ವೇಳೆ ಪಿಎಫ್ಐ ಕಾರ್ಯಕರ್ತರು ಮಾಡಿದ ಹಾನಿಯಿಂದ 5.20 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.