ಬಂಟ್ವಾಳ, ಜ 21 (DaijiworldNews/HR): ಅರ್ಜಿ ಹಾಕದೆ, ಕಚೇರಿಗೆ ಅಲೆದಾಡದೆ ಬಂದ ಯೋಜನೆ ಇದ್ದರೆ ಅದು ಕಿಸಾನ್ ಸಮ್ಮಾನ್ ಯೋಜನೆಯಾಗಿದ್ದು, ರಾಜ್ಯದಲ್ಲಿ 53 ಲಕ್ಷ ಕುಟುಂಬಗಳಿಗೆ ಇದರ ಪ್ರಯೋಜನ ಲಭಿಸಿದ್ದು, ಇದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ಹೆಮ್ಮೆಯಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಸರಪಾಡಿ ಶರಭೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ "ಗ್ರಾಮ ವಿಕಾಸ ಯಾತ್ರೆ" "ಗ್ರಾಮದೆಡೆಗೆ ಶಾಸಕರ ನಡಿಗೆ" ಪಾದಯಾತ್ರೆಯ 7 ನೇ ದಿನದ ಸಭಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರದಲ್ಲಿ ರೈತರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿ ಮಾಡಲಾಗಿದ್ದು, 12 ಲಕ್ಷ ಟೈಲರ್ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯನ್ನು ವಿಸ್ತರಣೆ ಮಾಡುವ ಘೋಷಣೆ ಮಾಡಲಾಗಿದೆ. ಗ್ರಾ.ಪಂ.ಸದಸ್ಯರ ಗೌರವಧನ ಹೆಚ್ಚಳಕ್ಕೆ ಹೋರಾಟ ಮಾಡುತ್ತಾ ಬಂದಿದ್ದು, ಅದಕ್ಕಾಗಿ ಮುಖ್ಯಮಂತ್ರಿಗಳು 165ಕೋ.ರೂ.ಗಳನ್ನು ಖರ್ಚು ಮಾಡಿದ್ದಾರೆ. ಜನಪರ ನಿಲುವುಗಳ ಮೂಲಕ ನಮ್ಮ ಸರಕಾರ ನಿರಂತರವಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡುತ್ತಾ ಬಂದಿದೆ.
ಜಗತ್ತು ನಾಯಕತ್ವ ಯಾರಿಗೆ ಎಂಬ ಪ್ರಶ್ನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಉತ್ತರವಾಗಿ ನಿಲ್ಲುತ್ತಾರೆ. ಭಾರತದ ತಾಕತ್ತು ಏನು ಎಂಬುದನ್ನು ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಾಭೀತಾಗಿದ್ದು, ಭಾರತದ ರಾಷ್ಟ್ರಧ್ವಜ ಕಂಡಾಗ ಯುದ್ಧವನ್ನೇ ನಿಲ್ಲಿಸಿ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ನಿಲ್ಲುತ್ತಾರೆ ಎಂದಾದರೆ ಪ್ರಧಾನಿ ಮೋದಿಯವರ ಘನತೆ ಏನು ಎಂಬುದು ಸಾಭೀತಾಗುತ್ತದೆ.
ಮಂಗಳೂರು ಕುಕ್ಕರ್ ಬಾಂಬರ್ ನ ಪರವಾಗಿ ಮಾತನಾಡುವ ಕಾಂಗ್ರೆಸ್ ಭಯೋತ್ಪಾದನೆಯನ್ನು ಸಮರ್ಥಿಸುವ ಕಾರ್ಯ ಮಾಡುತ್ತೀರಿ ಎಂದಾದರೆ ನಿಮ್ಮ ಮಾನಸಿಕತೆ ಏನು ಎಂಬುದು ತಿಳಿಯುತ್ತದೆ.
ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರ ಎಲ್ಲಾ ವರ್ಗ, ಧರ್ಮವನ್ನು ಸಮಾನವಾಗಿ ಕಂಡವರು ಎಂದು ಅತ್ಯಂತ ಹೆಮ್ಮೆಯಿಂದ ಹೇಳುತ್ತಿದ್ದೇವೆ. ಮುಂದಿನ ಚುನಾವಣೆ ದೇಶ ಭದ್ರತೆ, ರಾಷ್ಟ್ರೀಯತೆ ಹಾಗೂ ಭಯೋತ್ಪಾದಕತೆಯ ನಡುವೆ ನಡೆಯುವ ಚುನಾವಣೆ ಎಂದರು. ಭಯೋತ್ಪಾದಕತೆಯನ್ನು ಬೆಂಬಲಿಸದ ಪರಿಣಾಮ ಬಂಟ್ವಾಳದಲ್ಲಿ ಶಾಂತಿ, ಸಾಮರಸ್ಯ ನೆಲೆಸಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ 1925ಕೋ.ರೂ.ಗಳ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದ್ದು, ಈ ಕಾರ್ಯವನ್ನು ಕರ್ತವ್ಯ ಎಂದು ಮಾಡಿದ್ದೇವೆ. 80ಕೋ.ರೂ.ಸಚಿವ ಕೋಟ ಅವರ ಇಲಾಖೆಯಿಂದಲೂ ಬಂದಿದ್ದು, ಇತ್ತೀಚಿಗೆ 1ಕೋ.ರೂ. ನಾಲ್ಕು ಸಮುದಾಯಗಳ ಭವನಕ್ಕೆ ಮಂಜೂರಾಗಿದ್ದು, ಇನ್ನೂ ಒಂದಷ್ಟು ಮೊತ್ತಗಳ ಅಗತ್ಯವಿದೆ ಎಂದು ಕೋಟ ಅವರಲ್ಲಿ ಮನವಿ ಮಾಡಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳದ ರಾಜಕೀಯ ಇತಿಹಾಸದಲ್ಲಿ ನಾಲ್ಕೂವರೆ ವರ್ಷಗಳಲ್ಲಿ 1900 ಕೋ.ರೂ. ಅನುದಾನ ಇದೇ ಮೊದಲು ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪಾದಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ, ಸಹ ಸಂಚಾಲಕರಾದ ಮಾದವ ಮಾವೆ, ಸುದರ್ಶನ ಬಜ, ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಸರಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ, ಪುರಸಭಾ ಸದಸ್ಯರಾದ ಶಶಿಕಲಾ, ರೇಖಾ ಪೈ, ಮೀನಾಕ್ಷಿ, ದೇವಕಿ ಉಪಸ್ಥಿತರಿದ್ದರು.
ಸರಪಾಡಿ ಗ್ರಾಮಪಂಚಾಯತ್ ಸದಸ್ಯ ಧನಂಜಯ ಶೆಟ್ಟಿ ಸ್ವಾಗತಿಸಿ,ಸುದರ್ಶನ್ ಬಜ ವಂದಿಸಿದರು. ಬಂಟ್ವಾಳ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.