ಮಂಗಳೂರು, ಜ 21 (DaijiworldNews/HR): ಉಳಿದೆಲ್ಲಾ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಅಂಬಿಗರ ಚೌಡಯ್ಯನವರು ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯ ಹೊಂದಿದ್ದ ನೇರ ನಿರ್ಭೀತ ನುಡಿಯ ವಚನಕಾರ ಎಂದು ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರೊಫೆಸರ್ ಡಾ. ಸೋಂದಾ ಭಾಸ್ಕರ್ ಭಟ್ ಅವರು ಬಣ್ಣಿಸಿದರು.
ಡಿ. 21ರ ಶನಿವಾರ ನಗರದ ತುಳು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಮೊಗವೀರ ವ್ಯವಸ್ಥಾಪಕ ಮಂಡಳಿ ಹಾಗೂ ಮಂಗಳೂರು, ಮುಲ್ಕಿಯ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘದ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಅಂಬಿಗರ ಚೌಡಯ್ಯ ನೇರ ಹಾಗೂ ನಿರ್ಭೀತ ನುಡಿಯ, ಕೆಚ್ಚೆದೆಯ ವಚನಕಾರ ಅವರು ಅನ್ಯಾಯ, ಜಾತಿಯತೆ, ಅಧಾರ್ಮಿಕ ಆಚರಣೆಗಳ ಹಾಗೂ ಡಾಂಬಿಕ ಆಚರಣೆಗಳ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದ ಕ್ರಾಂತಿಕಾರಿ ವಚನಕಾರ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕೆ.ಎಚ್. ಅವರು ಮಾತನಾಡಿ, ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು ನಂಬಿದರೆ ಒಂದೇ ಹುಟ್ಟಲ್ಲಿ ಕಡೆಯ ಹಾಯಿಸುವ ನಂಬಿಗರ ಚೌಡಯ್ಯ ಎಂಬ ಚೌಡಯ್ಯನವರ ವಚನದೊಂದಿಗೆ ಮೂಢನಂಬಿಕೆಗಳು, ಅತಿಮಾನುಷ ಶಕ್ತಿಗಳಿಂದ ಅಂಬಿಗರು ದೂರ ಉಳಿದಿದ್ದರು, ಕಾಯಕವೇ ಕೈಲಾಸ ಎಂಬ ಚೌಡಯ್ಯನವರ ಜೀವನಾದರ್ಶ ನಮ್ಮೆಲ್ಲರಿಗೂ ಮಾರ್ಗದರ್ಶಿ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜಿಲ್ಲಾಡಳಿತದ ಪರವಾಗಿ ಶುಭಹಾರೈಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಉಲ್ಲಾಳ್, ಮುಲ್ಕಿ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘದ ಅಧ್ಯಕ್ಷ ಈರಂಗಪ್ಪ ದೇಸುಣಿಗೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ಮೊಗವೀರ ವ್ಯವಸ್ಥಾಪಕ ಮಂಡಳಿ ವತಿಯಿಂದ ವಿವಿಧ ಭಜನೆಗಳ ಸ್ಪರ್ಧಾ ಕಾರ್ಯಕ್ರಮ ಜರುಗಿತು.