ಬಂಟ್ವಾಳ, ಜ 21 (DaijiworldNews/HR): ಸಾರ್ವಜನಿಕರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಕಂದಾಯ ಇಲಾಖೆಯಿಂದ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದರು.
ತಿಂಗಳ ಮೂರನೇ ಶನಿವಾರ ಜ.21ರಂದು ಬಂಟ್ವಾಳ ತಾಲೂಕಿನ ಮಾಣಿಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಸ್ಥರ ಕೆಲಸ ಕಾರ್ಯಗಳು ಗ್ರಾಮಮಟ್ಟದಲ್ಲಿ ಆಗದಿದ್ದ ಸಂದರ್ಭದಲ್ಲಿ ಅವರು ತಾಲೂಕು ಮಟ್ಟದ ಕಚೇರಿಗಳಿಗೆ ಬರುತ್ತಾರೆ, ಅಲ್ಲಿ ಅನುಮೋದನೆ ದೊರೆಯದ ಸಂದರ್ಭಗಳಲ್ಲಿ ಉಪ ವಿಭಾಗಕ್ಕೆ ತೆರಳುತ್ತಾರೆ, ಅಲ್ಲಿಯೂ ಅವರ ಕೆಲಸಗಳು ಆಗದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳ ಕಚೇರಿಗೆ ಬರುತ್ತಾರೆ, ಅಷ್ಟು ದೂರದಿಂದ ಆಗಮಿಸಿ, ಅಧಿಕಾರಿಗಳ ಭೇಟಿಗೆ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ, ಗ್ರಾಮಸ್ಥರ ಕೆಲಸ ಕಾರ್ಯಗಳು ಅದೇ ಗ್ರಾಮದಲ್ಲಿಯೇ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆಯಾ ಗ್ರಾಮಗಳ ಜನರು ತಮ್ಮ ವೈಯಕ್ತಿಕ ಅಥವಾ ಗ್ರಾಮಕ್ಕೆ ಬೇಕಾದ ರಸ್ತೆಗಳು, ಇತರೆ ಮೂಲಭೂತ ಸೌಕರ್ಯಗಳ ಅನುಮೋದನೆಗಳಿಗೆ ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಬರುತ್ತಾರೆ, ಅವರ ಸಮಸ್ಯೆಗಳನ್ನು ಬಗೆ ಹರಿಸಲು ಸ್ವತಃ ಅಧಿಕಾರಿಗಳೆ ಗ್ರಾಮಕ್ಕೆ ಆಗಮಿಸಿ ಅಲ್ಲಿರುವ ಸಮಸ್ಯೆಗಳನ್ನು ಕಂಡು, ಅವುಗಳಿಗೆ ಪರಿಹಾರ ಕಲ್ಪಿಸಿಕೊಡುವುದು ಅಥವಾ ಅಲ್ಲಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಸೃಷ್ಟಿಯ ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇದರಿಂದ ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಮಾಣಿಲ ಹಾಗೂ ಅಕ್ಕ ಪಕ್ಕದಲ್ಲಿರುವ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮಕ್ಕೆ ಅಧಿಕಾರ ವರ್ಗ ಬಂದಿದ್ದು, ಇದಕ್ಕೂ ಮುನ್ನ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಸ್ಯೆಗಳನ್ನು ಅರಿಯಲು ಪೂರ್ವಭಾವಿ ಸಭೆಯನ್ನು ನಡೆಸಲಾಗಿತ್ತು ಎಂದು ಅವರು ತಿಳಿಸಿದರು.
ಶಾಸಕ ಸಂಜೀವ್ ಮಠಂದೂರು ಮಾತನಾಡಿ, ಸಾಮಾನ್ಯ ವ್ಯಕ್ತಿ ಸ್ವಾವಲಂಬಿಯಾಗಿ ಹಾಗೂ ಸ್ವಾಭಿಮಾನಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತವೇ ಫಲಾನುಭವಿಗಳ ಮನೆಗೆ ಹೋಗಿ ಸವಲತ್ತು ನೀಡುವ ಕೆಲಸವನ್ನು ಆರಂಭಿಸಿದೆ, ಅಲ್ಲದೆ ಸರ್ಕಾರವು ಜನಸಾಮಾನ್ಯರ ಅನುಕೂಲಕ್ಕೆ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಈ ಮೂಲಕ ತಿಳಿಸಿಕೊಡಲಾಗುತ್ತಿದೆ, ಸರ್ಕಾರದ ಕಂದಾಯ ಸಚಿವರೆ ಸ್ವತಃ ಗ್ರಾಮಗಳಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮದೆಡೆ ತೆರಳಿದಾಗ ಸಮಸ್ಯೆಗೆ ಪರಿಹಾರ ದೊರಕುವ ಕೆಲಸ ಆಗುತ್ತದೆ. ಮರಳು, ಕೆಂಪುಕಲ್ಲು, ಪ್ರಮಾಣಪತ್ರಗಳು ಸೇರಿದಂತೆ ಗಡಿಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ. ಹೋದ ತಕ್ಷಣ ಕೆಲಸ ಆಗುವ ಕಾರ್ಯ ಆಗಬೇಕು, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಜನರಿಗೆ ಹತ್ತಿರವಾದಷ್ಟು ಸಮಸ್ಯೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ, ಹಲವು ಬೇಡಿಕೆಗಳನ್ನು ಮಂಡಿಸಿದರು. ಸಹಾಯಕ ಆಯುಕ್ತ ಮದನ್ ಮೋಹನ್, ಭೂ ದಾಖಲೆಗಳ ಉಪ ನಿರ್ದೇಶಕ ನಿರಂಜನ್, ಬಂಟ್ವಾಳ ತಹಶೀಲ್ದಾರ್ ದಯಾನಂದ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವನಿತಾ ಹಾಗೂ ಇತರರು ವೇದಿಕೆಯಲ್ಲಿದ್ದರು.
ಉಪತಹಶೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು. ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಯಿತು.