ಮೂಡುಬಿದಿರೆ, ಮಾ 11(SM): ತಾಲೂಕು ಉದ್ಘಾಟನೆ ಸಮಾರಂಭದಲ್ಲಿ ನಿರೂಪಕರು ಅಬ್ಬಕ್ಕ ವಿಚಾರ ಪ್ರಸ್ತಾಪಿಸುವಾಗ, ಅದನ್ನು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜ ತಡೆದಿದ್ದಾರೆ. ಈ ಮೂಲಕ ವೀರ ರಾಣಿ ಅಬ್ಬಕ್ಕಗೆ ಅವಮಾನ ಮಾಡಲಾಗಿದೆ ಎಂದು ಜವನೆರ್ ಬೆದ್ರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ವೀರ ರಾಣಿ ಅಬ್ಬಕ್ಕ ಮೂಡುಬಿದಿರೆಯ ಹೆಮ್ಮೆಯ ಪ್ರತೀಕ. ಪ್ರಥಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವುದು ನಮ್ಮ ಕರ್ತವ್ಯ. ತಾಲೂಕು ಉದ್ಘಾಟನೆಯ ಸಂದರ್ಭದಲ್ಲಿ ನಿರೂಪಕರು ಮೂಡುಬಿದಿರೆ ವೈಶಿಷ್ಟ್ಯವನ್ನು ಹೇಳುವಾಗ ರಾಣಿ ಅಬ್ಬಕ್ಕಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅದು ಪೂರ್ಣವಾಗುವ ಮೊದಲೇ ನಿರೂಪಕರಿಗೆ ಐವನ್ ಡಿ’ಸೋಜ, ಮುಂದುವರಿಸದಂತೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು, ಮೂಡುಬಿದಿರೆ ನಿವಾಸಿಗಳೇ ಹೆಚ್ಚಿದ್ದ ಸಮಾರಂಭದಲ್ಲಿ ಅಬ್ಬಕ್ಕ ವಿಚಾರವು ಅಪೂರ್ಣವಾಗಿದೆ.
ಮೂಡುಬಿದಿರೆ ಮನೆ ಮಗಳು ರಾಣಿ ಅಬ್ಬಕ್ಕಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ, ಇತಿಹಾಸವನ್ನು ಯುವಪೀಳಿಗೆಗೆ ಮುಟ್ಟಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ಅಸಡ್ಡೆ ತೋರುವುದು, ಅವಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜವನೆರ್ ಬೆದ್ರ ಇತಿಹಾಸ ಸ್ಮಾರಕ, ಹೆಮ್ಮೆಯ ಪ್ರತೀಕವಾದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಅಬ್ಬಕ್ಕಳ ಪ್ರತಿಮೆ ಸ್ಥಾಪಿಸಬೇಕೆನ್ನುವ ಚಿಂತನೆಗೆ ಆಡಳಿತಾತ್ಮಕ ತೊಂದರೆಗಳು ಕಾಣಿಸಿಕೊಂಡಿವೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲೂ ಜನಪ್ರತಿನಿಧಿಗಳು ಸಹಕಾರ ನೀಡದಿರುವುದು, ಜನಪ್ರತಿನಿಧಿಗಳಲ್ಲಿ ಇತಿಹಾಸದ ಪ್ರಜ್ಞೆ ಎಷ್ಟಿದೆ ಎನ್ನುವದನ್ನು ಪ್ರಶ್ನಿಸುವಂತಿದೆ ಎಂದು ಅಮರ್ ಕೋಟೆ ಹೇಳಿದರು.