ಮಂಗಳೂರು, ಜ 20 (DaijiworldNews/DB): ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬುದಾಗಿ ವಿಶ್ವ ಹಿಂದು ಪರಿಷತ್-ಬಜರಂಗದಳದಿಂದ ಅಳವಡಿಸಲಾಗಿದ್ದ ಬ್ಯಾನರ್ನ್ನು ಪೊಲೀಸರು ಗುರುವಾರ ತೆರವುಗೊಳಿಸಿದ್ದಾರೆ.
ಜನವರಿ 15ರಿಂದ 21ರವರೆಗೆ ಕದ್ರಿ ಜಾತ್ರೆ ನಡೆಯಲಿದೆ. ಆದರೆ ಈ ಜಾತ್ರೆಯಲ್ಲಿ ಸನಾತನ ಧರ್ಮದ ಹಾಗೂ ಆಚರಣೆಯಲ್ಲಿ ನಂಬಿಕೆ ಹಾಗೂ ವಿಶ್ವಾಸ ಉಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ ಎಂದು ಗುರುವಾರ ಕ್ಷೇತ್ರದ ಬಳಿ ಬ್ಯಾನರ್ ಹಾಕಲಾಗಿದೆ.
ಇನ್ನು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಮೊದಲು ಗುರಿ ಮಾಡಿದ್ದೇ ಕದ್ರಿ ಮಂಜುನಾಥ ದೇವಸ್ಥಾನವನ್ನು. ಅಂತಹ ಮನಸ್ಥಿತಿ ಇರುವವರಿಗೆ ಹಾಗೂ ವಿಗ್ರಹಾರಾಧನೆಯನ್ನು ಹರಾಮ್ ಎಂದು ನಂಬಿರುವವರಿಗೆ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದೂ ಬ್ಯಾನರ್ನಲ್ಲಿ ಬರೆಯಲಾಗಿತ್ತು.
ಕದ್ರಿ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವುದರಿಂದ ಬ್ಯಾನರ್ ಅಳವಡಿಕೆಗೆ ಆಡಳಿತ ಮಂಡಳಿಯ ಅನುಮತಿ ಇರಲಿಲ್ಲ. ಹೀಗಾಗಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬ್ಯಾನರ್ನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇನ್ನು ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.