ಮಂಗಳೂರು, ಮಾ 11 (MSP): ಪ್ರಯಾಣಿಕ ವಾಹನಗಳಾದ ಟೂರಿಸ್ಟ್ ಟ್ಯಾಕ್ಸಿ,ಲಕ್ಸುರಿ ಟ್ಯಾಕ್ಸಿ ಇತ್ಯಾದಿ ವಾಹನಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳೂರು ಉಪಸಾರಿಗೆ ಆಯುಕ್ತರು ( ಪ್ರಭಾರ) ಹಾಗೂ ಪ್ರಾದೇಶಿಕ ಸಾರಿಗೆ ಹಿರಿಯ ಅಧಿಕಾರಿಗಳು ವಾಣಿಜ್ಯ ಬಳಕೆಯ ವಾಹನಗಳ ಚೈಲ್ಡ್ ಲಾಕ್ ತೆರವಿಗೆ ಆದೇಶಿಸಿದ್ದಾರೆ.
ಕಚೇರಿ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಪ್ರಯಾಣಿಕರ ಮೋಟಾರು ವಾಹನಗಳಾದ ಟೂರಿಸ್ಟ್ ಟ್ಯಾಕ್ಸಿ, ಲಕ್ಸುರಿ ಟ್ಯಾಕ್ಸಿ,ಮೋಟಾರು ಕ್ಯಾಬ್ ಆಸನ ಸಾಮರ್ಥ್ಯ
4+1, 5+1 ಹಾಗೂ 6+1 ವಾಹನಗಳಲ್ಲಿ ಚೈಲ್ಡ್ ಲಾಕ್ನ್ನು ಮಾರ್ಚ್ 25 ರೊಳಗೆ ಗ್ಯಾರೇಜುಗಳಲ್ಲಿ ನಿಷ್ಕ್ರಿಯಗೊಳಿಸಿ, ಕಚೇರಿಯ ಮೋಟಾರು ವಾಹನ ನಿರೀಕ್ಷಕರಿಂದ ದೃಡೀಕರಿಸಿ ಪ್ರಮಾಣ ಪತ್ರವನ್ನು ಹಾಜರುಪಡಿಸಲು ಇಲಾಖೆ ತಿಳಿಸಿದೆ.
ಚೈಲ್ಡ್ ಲಾಕ್ನ್ನು ಮಾರ್ಚ್ 25 ರೊಳಗಾಗಿ ನಿಷ್ಕ್ರಿಯಗೊಳಿಸದಿರುವ ವಾಹನ ಮಾಲೀಕರ ವಿರುದ್ದ ಕಚೇರಿಯಿಂದ ತನಿಖಾ ತಂಡಗಳನ್ನು ರಚಿಸಿ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.