ಮಂಗಳೂರು, ಜ 18 (DaijiworldNews/SM): ನಗರಕ್ಕೆ 4,750 ಕೋಟಿ ಅನುದಾನ ಅನ್ನುವ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ಬೋಗಸ್ ಆಗಿದೆ. ಜಲಸಿರಿ, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಎಲ್ಲವೂ ಕಾಂಗ್ರೆಸ್ ಸರಕಾರ ಇದ್ದಾಗ ಬಂದಿರುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಯೋಜನೆ, ಅನುದಾನಗಳಿಗೆ ಶಂಕುಸ್ಥಾಪನೆ ಮಾಡಿದ್ದಷ್ಟೇ ಈಗಿನ ಶಾಸಕರ ಸಾಧನೆ. ಇವರಿಗೆ ಕನಿಷ್ಠ ಒಂದು ಮನೆ ಕಟ್ಟಿಕೊಡಲು ಯೋಗ್ಯತೆ ಇಲ್ಲ. ಇವರಿಗೆ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಬಿಜೆಪಿಯವರು ಮಂಗಳೂರು ನಗರವನ್ನು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತಾನು ಶಾಸಕನಾಗಿದ್ದಾಗ ತಂದಿದ್ದ ಅನುದಾನಗಳನ್ನು ಶಂಕುಸ್ಥಾಪನೆ ಮಾಡಿ, ಶಾಸಕರು ತನ್ನದೆಂದು ಹೇಳುತ್ತಿದ್ದಾರೆ. ಇವರ ಸರ್ಕಾರದಿಂದ ತಂದಿರುವ ಅನುದಾನ, ಯೋಜನೆ ಏನೆಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಹೇಳಿದರು. ಮೀನುಗಾರಿಕೆ ಬಂದರಿನಿಂದ ಬೆಂಗ್ರೆಗೆ 35 ಕೋಟಿ ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸುವುದು ಅತ್ಯಂತ ಅವೈಜ್ಞಾನಿಕ ಯೋಜನೆ. ಅಲ್ಲಿ ಖಾಯಂ ಸೇತುವೆ ಮಾಡಿದರೆ, ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆಯಾಗುತ್ತದೆ. ಅಲ್ಲಿಂದ ವಾಹನಗಳಲ್ಲಿ ಬರುವುದಕ್ಕೆ ದಾರಿಯಾಗುತ್ತದೆ. ನವ ಮಂಗಳೂರು ಬಂದರಿಗೆ ಕನೆಕ್ಟ್ ಆಗಲು ಸಾಧ್ಯವಾಗುತ್ತದೆ. ಅಲ್ಲಿ ಪ್ರವಾಸೋದ್ಯಮ ದೃಷ್ಟಿಯ ತೂಗುಸೇತುವೆ ಅವೈಜ್ಞಾನಿಕ ಚಿಂತನೆ ಎಂದು ಅವರು ಆರೋಪಿಸಿದ್ದಾರೆ.