ಉಡುಪಿ, ಜ 18 (DaijiworldNews/HR): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ ಮತ್ತು ಹಲವಾರು ಮಂದಿ ಬಿಜೆಪಿ ಮತ್ತು ಜನತಾದಳದ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಕಾಂಗ್ರೆಸ್ ಮೈಸೂರು ವಿಬಾಗದ ಉಸ್ತುವಾರಿ ಧ್ರುವ ನಾರಾಯಣ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜನತಾದಳದ ಮೇಲೆ ನಂಬಿಕೆ ಕಳಕೊಂಡ ಬಹಳಷ್ಟು ಜನರು ಮತ್ತು ಹಾಲಿ ಶಾಸಕರೇ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬರಲಿದೆ ಮತ್ತು ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ಸಿದ್ದರಾಮಯ್ಯ ಸರಕಾರದ ಸಂಧರ್ಭದಲ್ಲಿನ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಆದರೆ ಬಜೆಪಿಯವರು ನಾವು ಪ್ರಣಾಳಿಕೆಯಲ್ಲಿದ್ದ ಇಷ್ಟು ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಮಾತೇ ಬರುತಿಲ್ಲ. ಅವರು ನೀಡಿದ್ದ 600 ಭರವಸೆಗಳಲ್ಲಿ 60 ಭರವಸೆಗಳನ್ನು ಕೂಡಾ ಪೂರೈಸಲು ಅವರಿಂದ ಸಾಧ್ಯವಾಗಿಲ್ಲ,. ಈಗ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ, ಚುನಾವಣೆ ಸಂಧರ್ಭದಲ್ಲಿ ಜನಸಂಕಲ್ಪ ಯಾತ್ರೆ, ಚುನಾವಣೆ ಆದ ಮೇಲೆ ಧನ ಸಂಕಲ್ಪ ಯಾತ್ರೆ ಮಾಡುತ್ತಾರೆ ಎಂದರು.
ಉಚಿತ ವಿದ್ಯುತ್ ಘೋಷಣೆಯ ಮೂಲಕ ಕಾಂಗ್ರೆಸ್ ವಿದ್ಯುಚ್ಛಕ್ತಿ ನಿಗಮವನ್ನು ಖಾಸಗಿಕರಣ ಮಾಡಲು ಹೊರಟಿದೆ ಎಂಬ ಸಚಿವ ಸುನಿಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ್, ಇದು ಇಂಧನ ಸಚಿವರ ಹತಾಶೆಯ ಹೇಳಿಕೆ. ಕರ್ನಾಟಕ ವಿದ್ಯುತ್ ಉತ್ಪತ್ತಿಯಲ್ಲಿ ಸ್ವಾವಲಂಬಿ ಆಗಿದ್ದು, ನಮ್ಮ ಸರಕಾರದ ಕಾಲದಲ್ಲಿ. ಆಗ ಸಿದ್ದರಾಮಯ್ಯ ಮುಖ್ಮಮಂತ್ರಿಯಾಗಿದ್ದು ಡಿಕೆ ಶೀವಕುಮಾರ್ ಇಂಧನ ಮಂತ್ರಿ ಆಗಿದ್ದರು. 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇತ್ತು, ಅದನ್ನು ತುಂಬಿಸಿದ್ದು ನಾವು. ಏಷ್ಯಾದಲ್ಲಿನ ಅತಿ ದೊಡ್ಡ ಸೋಲಾರ್ ಪಾರ್ಕ್ ನಮ್ಮ ಕಾಲದಲ್ಲಿ ಆದದ್ದು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ತಾವು ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಇದರ ಬಗ್ಗೆ ಬೆಳಕು ಚೆಲ್ಲಿ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಸಂಧರ್ಭದಲ್ಲಿ ಕರ್ನಾಟಕದ ಸಾಲ ಇದ್ದಿದ್ದು 2.5 ಲಕ್ಷ ಕೋಟಿ ಆದರೆ ಕಳೆದ ಮೂರು ವರ್ಷದ ಆಡಳಿತದಲ್ಲಿ ಇದರ ಮೊತ್ತ ಸರಾಸರಿ 5 ಲಕ್ಷ ಕೋಟಿ ಆಗಿದೆ. ಕರ್ನಾಟಕ ರಾಜ್ಯದ ಆರ್ಥಿಕ ದಿವಾಳಿತನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ,. 70 ವರ್ಷದಲ್ಲಿ ಇದ್ದಿದ್ದು 2.5 ಲಕ್ಷ ಕೋಟಿ ಸಾಲ, ಬರೇ ಮೂರು ವರ್ಷದಲ್ಲಿ ಇದು ಏರಿಕೆ ಆಗಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಅವರಿಗೆ. ಇಡೀ ಬೊಕ್ಕಸವನ್ನು ಖಾಲಿ ಮಾಡಿ ಲೂಟಿ ಮಾಡುತ್ತಿದ್ದಾರೆ, ಇದು ಲೂಟಿ ಸರಕಾರ. ಅಮಿತ್ ಶಾ ಅವರು ಮಂಡ್ಯದ ಸಭೆಯಲ್ಲಿ ದೇಶದ ಬೆಳವಣಿಗೆಯ ಕುರಿತು ಬೆಳಕು ಚೆಲ್ಲುವ ಬದಲು, ಅಲ್ಲಿ ಬಂದು ರಾಮನಗರದಲ್ಲಿ ರಾಮನ ದೇವಸ್ಥಾನ ಮಾಡುತ್ತೇವೆ, ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನ ಮಾಡುತ್ತೇವೆ ಎಂದಿ್ದ್ದಾರೆ. ನಾವು ಯಾರೂ ಕೂಡಾ ದೇವಸ್ಥಾನ ಕಟ್ಟುವುದಕ್ಕೆ ವಿರೋಧ ಇಲ್ಲ. ನಾವು ಕೂಡಾ ಭಕ್ತರೇ. ಆದರೆ ಮನುಷ್ಯನ ಜೀವನ ಮುಖ್ಯ. ಹೊಟ್ಟೆಗೆ ಹಿಟ್ಟು ಇಲ್ಲದೇ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವ ಸಿದ್ದಾಂತ ಬಿಜೆಪಿಯದ್ದು. ಕಾಂಗ್ರೆಸ್ ಯಾವತ್ತೂ ಹಸಿದವರಿಗೆ ಅನ್ನು ನೀಡಿರುವ ಪಕ್ಷ. ಕಾರ್ಯಕ್ರಮಗಳಿಗೆ ತಕ್ಕ ಹಾಗೆ ಆರ್ಥಿಕ ಶೇಖರಣೆ ಯಾವ ರೀತಿ ಮಾಡಬೇಕು ಎಂಬುವುದನ್ನು ನಾವು ತೋರಿಸಿ ಕೊಟ್ಟಿದ್ದೇವೆ ಎಂದು ಟೀಕಿಸದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿಗಳು ಮೈಸೂರು ವಿಭಾಗದ ಉಸ್ತುವಾರಿಗಳೂ ಆದ ರೋಝೀ ಜೋನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಚಿಕ್ಕಮಂಗಳೂರು ಮತ್ತು ಉಡುಪಿ ಕ್ಷೇತ್ರದ ಉಸ್ತುವಾರಿಗಳಾದ ಪ್ರತಾಪನ್, ಕೆಪಿಸಿಸಿ ಉಪಾಧ್ಯಕ್ಷರಾದ ವಿನಯಕುಮಾರ್ ಸೊರಕೆ, ಅಖಿಲಭಾರತ ಮೀನುಗಾರ ಕಾಂಗ್ರೆಸ್ ಅಧ್ಯಕ್ಷರಾದ ಆರ್ಮ್ ಸ್ಟ್ರಾಂಗ್ ಫೆರ್ನಾಂಡೀಸ್ˌ ರಾಜ್ಯ ಮೀನುಗಾರ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಸೋನೆಗಾರ್, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.