ಮಂಗಳೂರು,ಮಾ 11 (MSP): ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಧಕ್ಕೆ ಮಾಡುವ ಸಾಧ್ಯತೆ ಇರುವ ಮೂರು ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾ.11ರ ಸೋಮವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಚುನಾವಣೆ ಸುಸೂತ್ರವಾಗಿ ನಡೆಯದಂತೆ ಸಂಚು ರೂಪಿಸುವ ಸಾಧ್ಯತೆ ಇರುವುದರಿಂದ ಮೂವರ ಗಡಿಪಾರಿಗೆ ಆದೇಶಿಸಲಾಗಿದೆ. ಶಾಂತಿಯುತ, ಪಾರದರ್ಶಕ ಚುನಾವಣೆಗೆ ಸಂಬಂಧಿಸಿ ಇಲಾಖೆಯು ಕೈಗೊಂಡಿರುವ ಅಗತ್ಯ ಕ್ರಮಗಳ ಭಾಗವಾಗಿ ಈ ಆದೇಶ ಮಾಡಲಾಗಿದ್ದು, 500ರಷ್ಟು ರೌಡಿ ಚಟುವಟಿಕೆಯುಳ್ಳವರನ್ನು ಗುರುತಿಸಿ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಇದರೊಂದಿಗೆ ನಗರ ವ್ಯಾಪ್ತಿಯಲ್ಲಿ 2,010 ಮಂದಿ ಶಸ್ತ್ರಾಸ್ತ್ರ ಪರವಾನಿಗೆದಾರರಿದ್ದು, ಅವರು ಸ್ಥಳೀಯ ಠಾಣೆಗಳಲ್ಲಿ ಅದನ್ನು ಠೇವಣಿ ಇರಿಸಲು ಸೂಚನೆ ನೀಡಲಾಗಿದೆ. ಮಂಗಳೂರು ನಗರದ ಆಯಕಟ್ಟಿನ ಆರು ಪ್ರದೇಶದಲ್ಲಿ ಮತ್ತು ಅಂತಾರಾಜ್ಯ ಗಡಿ ಪ್ರದೇಶದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚೆಕ್ ಪೋಸ್ಟ್ ಗಳನ್ನು ತೆರೆದು ನಿರಂತರ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಕೇಂದ್ರ ಪ್ರಹಾರದಳವೂ ಜನರಲ್ಲಿ ವಿಶ್ವಾಸ, ಧೈರ್ಯ ತುಂಬುವ ನಿಟ್ಟಿನಲ್ಲಿ ಪಥ ಸಂಚಲನ ನಡೆಸಿ , ಸೂಕ್ತ ಬಂದೋಬಸ್ತ್ ನಡೆಸುತ್ತದೆ. ಇದಲ್ಲದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ತಕ್ಷಣ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿಕೊಂಡರು.