ಕಾರ್ಕಳ, ಜ 17 ( DaijiworldNews/MS): ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಎಂದೆಂದಿಗೂ ಶಾಂತಿ-ಸೌಹಾರ್ದತೆ ನೆಲೆಬೀಡಾಗಿ ಉಳಿಯಲಿದೆ. ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ಜೊತೆಗೆ ದೇವರ ಮೇಲಿನ ನಂಬಿಕೆಯೂ ಮಾನವನ ಆಯುಷ್ಯ ವೃದ್ಧಿಯನ್ನುಂಟು ಮಾಡುತ್ತದೆ. ಇದರ ಮೇಲೆ ನಂಬಿಕೆಯಿಂದಲೇ ಸಂತ ಲಾರೆನ್ಸ್ ಬಸಿಲಿಕಾಕ್ಕೆ ಭಕ್ತಾದಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಜನವರಿ 22ರಿಂದ 26ರ ತನಕ ಜರಗಲಿರುವ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಯಲಿದೆ ಎಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಆಲ್ವನ್ ಡಿಸೋಜಾ ಹೇಳಿದರು.
ನೀವು ನನಗೆ ಸಾಕ್ಷಿಗಳಾಗುವಿರಿ-ಎಂಬ ಮಹೋತ್ಸವದ ವಿಷಯದೊಂದಿಗೆ ನಡೆಯುವ ಈ ೫ ದಿನಗಳ ಉತ್ಸವದ ಅವಧಿಯಲ್ಲಿ ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. ೨೨ರ ಪೂರ್ವಾಹ್ನ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ಪರಮ ಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ, ಜ. 23ರಂದು ಬೆಳಿಗ್ಗೆ 10 ಗಂಟೆಗೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ಪರಮ ಪೂಜ್ಯ ಜೀವರ್ಗಿಸ್ ಮಾರ್ ಮಕರಿಯೋಸ್ ಕಲಯಿಲ್, ಜ. 24ರಂದು ಸಂಜೆ 6 ಗಂಟೆಗೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮ ಪೂಜ್ಯ ಲೊರೆನ್ಸ್ ಮುಕ್ಕುಝಿ, ಜ. 25 ರಂದು ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮ ಪೂಜ್ಯ ಆಲೋಷಿಯಸ್ ಪಾವ್ಲ್ ಡಿ’ಸೋಜಾ , ಜ. ೨೬ರಂದು ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ಪರಮ ಪೂಜ್ಯ ಬರ್ನಾರ್ಡ್ ಮೊರಾಸ್ ಅವರು ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು.
ಮಹೋತ್ಸವದ ದಿನಗಳಲ್ಲಿ ಪ್ರತಿದಿನ ಪೂರ್ವಾಹ್ನ 8, 10, 12, ಅಪರಾಹ್ನ 2, 4, 6, 8 ಗಂಟೆಗೆ ಸೇರಿದಂತೆ ೭ ಬಲಿಪೂಜೆಗಳು ನಡೆಯಲಿರುವುದು. ಜ. ೨೧ರಂದು ಮಧ್ಯಾಹ್ನ 3.30 ಗಂಟೆಗೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿರುವುದು ಎಂದು ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಅಲ್ಬನ್ ಡಿ’ಸೋಜಾ ತಿಳಿಸಿದ್ದಾರೆ.
ಭಿಕ್ಷಾಟನೆ ನಿಷೇಧ:
ಅತೀ ಪುರಾತನ ಧಾರ್ಮಿಕ ನೆಲೆಬೀಡು ಅತ್ತೂರು ಪುಣ್ಯ ಕ್ಷೇತ್ರದಲ್ಲಿ ಅನಾಧಿ ಕಾಲದಿಂದಲೂ ಭಿಕ್ಷಾಟನೆಗೆ ಮಹತ್ವ ನೀಡುತ್ತಾ ಬಂದಿದೆ. ಅದಕ್ಕಾಗಿ ಭಿಕ್ಷಾ ಪಾತ್ರೆಗಳನ್ನು(ಕಾಣಿಕೆ ಡಬ್ಬಿಗಳನ್ನು) ಇರಿಸಲಾಗುತ್ತಿತ್ತು. ಕನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ -1975 ರ ಸನ್ವಯ ಭಿಕ್ಷಾಟನೆ ಅಪರಾಧವಾಗಿರುವುದರಿಂದ ಜಾತ್ರಮಹೋತ್ಸವದ ಅಂತಿಮ ದಿನದಂದು ಭಿಕ್ಷುಕರಿಗೆ ನೀಡುತ್ತಿದ್ದ ಆಹಾರದ ಪೊಟ್ಟಣದ ಜೊತೆಗೆ ಹಣ(ಭಿಕ್ಷೆ) ನೀಡುವ ಕ್ರಮವನ್ನು ಕೈಬಿಡಲಾಗಿತ್ತು.
ಸಾಂಪ್ರದಾಯಿಕ ಭಿಕ್ಷಾಟಣೆಯು ಭಕ್ತಾದಿಗಳು ಹರಕೆಯ ರೂಪದಲ್ಲಿ ಸಲ್ಲಿಸುವ ಕುರಿತು ಬಸಿಲಿಕಾದ ಆಡಳಿತ ಮಂಡಳಿಯ ಗಮನಕ್ಕೆ ತರುವು ಮೂಲಕ ಸಾಧಕ_ಭಾದಕಗಳ ಕುರಿತು ಚರ್ಚೆ ನಡೆಸಿ ಜಿಲ್ಲಾಡಳಿತದ ನಿರ್ದೇಶನದಂತೆ ಮಂದಿನ ವರ್ಷ ಕ್ರಮ ಕೈಗೊಳ್ಳುವ ಭರವಸೆಯನ್ನು ಇದೇ ಸಂದರ್ಭದಲ್ಲಿ ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಅಲ್ವನ್ ಡಿಸೋಜಾ ಮಾಹಿತಿ ನೀಡಿದ್ದಾರೆ.
ಬಸಿಲಿಕಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಪ್ರಧಾನ ಕಾರ್ಯದರ್ಶಿ ಬೆನೆಡಿಕ್ಟ್ ನೊರೋನ್ಹಾ ಉಪಸ್ಥಿತರಿದ್ದರು.