ಕಾರ್ಕಳ, ಮಾ 11 (MSP): ತೆಳ್ಳಾರು ಕಲ್ಲೊಟ್ಟು ಕಾರಣಿಕ ಪುಣ್ಯಸ್ಥಳದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಬ್ರಹ್ಮಲಿಂಗೇಶ್ವರ, ಅಬ್ಬಗದಾರಗ ಆದಿಆಲಡೆಯ ಪುನರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.
ಇದೇ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಧ್ವಜಸ್ತಂಭ (ಕೊಡಿಮರ)ಮರ ಕಡಿಯುವ ಮಹೂರ್ತವು ಪಂಜದ ಸುಬ್ರಹ್ಮಣ್ಯದಲ್ಲಿ ನೆರವೇರಿತು. 16 ಚಕ್ರದ ಟ್ರಾಲಿ ಮೂಲಕ ಕೊಡಿಮರವನ್ನು ಮಂಗಳೂರಿಗೆ ಸಾಗಿಸಲಾಗಿದ್ದು, ಅಲ್ಲಿಂದ ಪಡುಬಿದ್ರಿ, ಬೆಳ್ಮಣ್ ಮಾರ್ಗವಾಗಿ ಕಾರ್ಕಳದ ಬಂಡೀಮಠಕ್ಕೆ ಸಾಗಿ ಬಂತು. ಇದೇ ಸಂದರ್ಭದಲ್ಲಿ ಅಸಂಖ್ಯಾತ ಭಕ್ತಾದಿಗಳು ಜಯಘೋಷಣೆ ಕೂಗಿದ್ದು, ಮಂಗಳವಾದ್ಯದೊಂದಿಗೆ ಮಾ. 10 ರ ಭಾನುವಾರ ಟ್ರಾಲಿಯನ್ನು ಬರಮಾಡಿಕೊಳ್ಳಲಾಯಿತು.
ಬಂಡೀಮಠ ಮೂಡುಗಣಪತಿ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಮೊದಲ ಪೂಜೆ ನೆರವೇರಿಸಲಾಯಿತು. ತದನಂತರ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಣಮಣ, ಶ್ರೀ ವೀರಭದ್ರ, ಶ್ರೀ ಮಾರಿಯಮ್ಮ, ಶ್ರೀ ಉಚ್ಚಂಗಿ ಮಾರಿಯಮ್ಮ, ಶ್ರೀ ಪದ್ಮಾವತಿ, ಶ್ರೀ ಅನಂತಪದ್ಮನಾಭ, ಶ್ರೀ ಸೂರ್ಯನಾರಾಯಣ, ಶ್ರೀ ಸಿದ್ಧಿವಿನಾಯಕ, ಶ್ರೀ ರವಲನಾಥ ದೇವಸ್ಥಾನ ಹಾಗೂ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೋರಿಮರವನ್ನು ನೇರವಾಗಿ ತೆಳ್ಳಾರು ಕಲ್ಲೊಟ್ಟು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತರಲಾಯಿತು.
ಇದೇ ವರ್ಷ ಮೇ ತಿಂಗಳ ಅಂತ್ಯದೊಳಗೆ ಶ್ರೀ ಕ್ಷೇತ್ರದ ಪುನರ್ಬ್ರಹ್ಮಕಲೋತ್ಸವವು ಹಾಗೂ ಧಾರ್ಮಿಕ ವಿಧಿವಿಧಾನ ನೆರವೇರಲಿರುವುದು. ಈ ಧಾರ್ಮಿಕ ಕಾರ್ಯದ ಮುಂದಾಳತ್ವವನ್ನು ಉದ್ಯಮಿ ಮಹೇಶ್ ಕುಡುಪುಲಾಜೆ ವಹಿಸಿದ್ದಾರೆ.