ಕಾಸರಗೋಡು, ಜ 16 (DaijiworldNews/HR): ಕೋಟ್ಯಾ೦ತರ ರೂ. ಠೇವಣಿ ಪಡೆದು ವಂಚಿಸಿದ ಪ್ರಕರಣವೊಂದು ಕಾಸರಗೋಡಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟನಂತೆ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ಇಬ್ಬರನ್ನು ಬೇಡಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂಡಂಕುಳಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಗ್ಲೋಬಲ್ ಬಿಸ್ ನೆಸ್ ಗ್ರೂಫ್ (ಜಿಬಿಜಿ) ನಿಧಿ ಲಿಮಿಟೆಡ್ ಸಂಸ್ಥೆಯ ಮಾಲಕ ಹಾಗೂ ಅಧ್ಯಕ್ಷ ವಿನೋದ್ ಕುಮಾರ್ (52) ಮತ್ತು ನಿರ್ದೇಶಕ ಗಂಗಾಧರ ನಾಯರ್ (66) ಬಂಧಿತರು.
ಬೆಳಿಗ್ಗೆ ಕಾಸರಗೋಡಿಗೆ ಆಗಮಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಪ್ರೆಸ್ ಕ್ಲಬ್ ಪರಿಸರದಿಂದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿನೋದ್ ಕುಮಾರ್ ಹಾಗೂ ಇತರರರು ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಲು ಆಗಮಿಸುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು, ಸ್ಪೆಷಲ್ ಬ್ರಾಂಚ್ ಗೆ ಮಾಹಿತಿ ಲಭಿಸಿದ್ದು, ದಾರಿ ಮಧ್ಯೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಲ ದಿನಗಳಿಂದ ಸಂಸ್ಥೆಯ ವಂಚನೆ ಕುರಿತು ಜಿಬಿಜಿ ಹಣಕಾಸು ಸಂಸ್ಥೆ ವಿರುದ್ಧ 20ಕ್ಕೂ ಅಧಿಕ ದೂರುಗಳು ಲಭಿಸಿದ್ದವು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ತನಿಖೆ, ನಡೆಸುತ್ತಿದ್ದು, ವಿನೋದ್ ಕುಮಾರ್ ಸೇರಿದಂತೆ ಆರು ಮಂದಿ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಿಂದ ತಲೆ ಮರೆಸಿಕೊಂಡಿದ್ದ ವಿನೋದ್ ಕುಮಾರ್ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಗೆ ಬರುವ ಮೊದಲೇ ವಿನೋದ್ ಕುಮಾರ್ ನನ್ನು ಬಂಧಿಸಲಾಗಿದೆ.
ಠೇವಣಿ ಹೂಡಿಕೆಗೆ ದುಪ್ಪಟ್ಟು ಬಡ್ಡಿ ನೀಡುವ ಬಗ್ಗೆ ಭರವಸೆ ನೀಡಿ 5 ಸಾವಿರದಿಂದ ಸುಮಾರು ಒಂದು ಲಕ್ಷ ರೂ. ತನಕ ಠೇವಣಿ ಪಡೆದುಕೊಂಡಿದ್ದು, ಠೇವಣಿ ಹೂಡಿ ಕಾಲಾವಧಿ ಕಳೆದರೂ ಹಣ ಹಾಗೂ ಬಡ್ಡಿ ಮೊತ್ತವನ್ನು ನೀಡದಿರುವುದರಿಂದ ಠೇವಣಿದಾರರು ಪೊಲೀಸ್ ಠಾಣಾ ಮೆಟ್ಟಲೇರಿದ್ದರು.
2020ರ ನವಂಬರ್ ನಲ್ಲಿ ಆರಂಭಿಸಿದ ಸಂಸ್ಥೆಯಲ್ಲಿ ಮೊದಲ ಕೆಲ ಸಮಯ ನೀಡಿದ ಭರವಸೆಯಂತೆ ಬಡ್ಡಿ ಮೊತ್ತವನ್ನು ನೀಡಲಾಗಿತ್ತು. ಇದರಿಂದ ಇನ್ನಷ್ಟು ಮಂದಿ ಆಕರ್ಷಿತರಾಗಿ ಠೇವಣಿ ಇರಿಸಿದ್ದರು. ತಿಂಗಳುಗಳಿಂದ ಹೂಡಿದ ಠೇವಣಿ ಹಾಗೂ ಬಡ್ಡಿ ಮೊತ್ತವನ್ನು ಲಭಿಸದ ಹಿನ್ನಲೆಯಲ್ಲಿ ಠೇವಣಿ ದಾರರು ದೂರು ನೀಡಿದ್ದರು.
ಸುಮಾರು 5,700 ಮಂದಿ ವಂಚನೆಗೊಳಗಾದವರಲ್ಲಿ ಒಳಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 400 ಕೋಟಿ ರೂ. ವಂಚನೆ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಕಾಸರಗೋಡು ಅಲ್ಲದೆ ಕಣ್ಣೂರು, ಕೋಜಿಕ್ಕೋಡ್, ತೃಶ್ಯೂರು, ವಯನಾಡು ಹಾಗೂ ಇತರ ಕಡೆಗಳಲ್ಲಿನ ಠೇವಣಿದಾರರಿಂದ ಹಣ ಪಡೆದಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.