ಉಡುಪಿ, ಮಾ 11 (MSP): ಶಿವಳ್ಳಿಯ ಸರ್ಗಿ ಹಾಡಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹ ಭಾನುವಾರ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮೃತ ಬಾಲಕಿಯನ್ನು ಉತ್ತರ ಕರ್ನಾಟಕದ ಬಾದಾಮಿ ಮೂಲದಾಕೆ ಎನ್ನಲಾಗಿದೆ.
ನಿಟ್ಟೂರಿನಲ್ಲಿ ನೆಲೆಸಿರುವ ಈ ಬಾಲಕಿ ತಾನು ಕೆಲಸ ಮಾಡುತ್ತಿರುವ ಉಡುಪಿ ಅಂಗಡಿಯಿಂದ ಮಾ.9ರಂದು ಮಧ್ಯಾಹ್ನ ಮನೆಗೆ ಹೊರಟ್ಟಿದ್ದು, ಅನಂತರ ನಾಪತ್ತೆಯಾಗಿದ್ದಳು. ಆದರೆ ಭಾನುವಾರ ಸಂಜೆ ವೇಳೆ ಸರ್ಗಿಯಲ್ಲಿ ಬಾಲಕಿಯ ಮೃತದೇಹ ಸಿಕ್ಕಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕಿಯ ಕೊಲೆಗೆ ಹಿಂದೆ ಅತ್ಯಾಚಾರದ ಆರೋಪವೂ ಕೇಳಿ ಬಂದಿದ್ದು, ಮಣಿಪಾಲದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಶವಾಗಾರದಲ್ಲಿ ಇರಿಸಲಾಗಿದೆ.
ಬಾಲಕಿಯನ್ನು ಅಪಹರಿಸಿ ಹಾಡಿಗೆ ಕರೆದುಕೊಂಡು ಹೋದ ದುಷ್ಕರ್ಮಿಗಳು ಶಾಲಿನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ಬಲವಾದ ಅನುಮಾನ ಮೂಡಿದೆ. ಬಾಲಕಿಯ ಮುಖವೂ ಸ್ವಲ್ಪ ಕೊಳೆತ ಸ್ಥಿತಿಗೆ ತಲುಪಿದೆ. ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.