ಪಡುಬಿದ್ರಿ, ನ 3: ಪ್ರದಾನ ಕೃಷಿಯಲ್ಲಿ ಒಂದಾದ ಭತ್ತ ಕೃಷಿ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರ. ಅಲ್ಲೋ ಇಲ್ಲೋ ಭತ್ತ ಕೃಷಿ ನೆಚ್ಚಿಕೊಂಡವರು ಎದುರಿಸುತ್ತಿರುವ ಸಮಸ್ಯೆ ಸಾವಿರಾರು. ಆದರೆ ಇಲ್ಲೊಂದು ವಿಪರ್ಯಾಸ ನೋಡಿ. ಪಡುಬಿದ್ರಿಯಿಂದ ಮೂಡು ಫಲಿಮಾರಿನತ್ತ ಪ್ರಯಾಣ ಬೆಳೆಸಿದರೆ ರಸ್ತೆಯ ಎರಡೂ ಕಡೆಗಳಲ್ಲಿ ಕಾಣಸಿಗುವುದು ಬೆಳೆದು ನಿಂತ ಫಸಲು. ಉತ್ತಮ ಇಳುವರಿಯಾಗಿ ಎಕ್ರೆಗಟ್ಟಲೆ ಪ್ರದೇಶದಲ್ಲಿ ಕಾಣಸಿಗುವ ಈ ಪೈರು ಬೆಳೆ ಕೊಯ್ಲಿಗಾಗಿ ಕಾದು ಕುಳಿತಿದೆ.
ದುರದೃಷ್ಟವಶಾತ್ ಕಳೆದ ಒಂದು ತಿಂಗಳಿಂದ ಹೊರ ರಾಜ್ಯದ ಬೆಳೆಕೊಯ್ಯುವ ಯಂತ್ರಕ್ಕಾಗಿ ಕಾಯುತ್ತಿದ್ದಾರೆ ಇಲ್ಲಿನ ರೈತರು. ಒಂದು ವೇಳೆ ಮಳೆ ಬಂದು ಗದ್ದೆಗಳಲ್ಲಿ ನೀರು ನಿಂತಲ್ಲಿ ಬೆಳೆದು ನಿಂತ ಪೈರೆಲ್ಲಾ ಕೊಳೆತು ಹೊಗುವ ಸಂದರ್ಭ ಇಲ್ಲವೆನ್ನುವಂತಿಲ್ಲ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದು. ಊರಿನ ಯುವಕರು ಕೆಸರು ಗದ್ದೆಯಲ್ಲಿ ಒಂದು ದಿನ ಮಾತ್ರ ಕಳೆಯುವ ಬದಲು ಕೃಷಿ ಕಾರ್ಯದಲ್ಲಿ ತೊಡಗಿಸಿ ಕೊಂಡಲ್ಲಿ ಇಂಥಹ ಪ್ರಮೇಯ ಉದ್ಭವಿಸಲಾರದು.
ಈಗಿನ ಕಾಲದಲ್ಲಿ ಕೃಷಿಕಾರ್ಯ ಮಾಡದೆ ಹಲವಾರು ಜನರು ತಮ್ಮ ಗದ್ದೆಗಳನ್ನು ಹಡೀಲು ಬಿಟ್ಟರುತ್ತಾರೆ. ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಕಾರ್ಯ ಮಾಡಿದ್ದೇವೆ. ಉತ್ತಮ ಬೆಳೆ ಬಂದಿದೆ,ಆದರೆ ಬೆಳೆ ಕೊಯ್ಯಲು ಊರಿನ ಜನರು ಯಾರೂ ಸಿಗುತ್ತಿಲ್ಲ. ಕೂಲಿಯಾಳುಗಳ ವೇತನ ಜಾಸ್ತಿಯಾದ್ದರಿಂದ ನಮಗೆ ಅದು ಲಾಭದಾಯಕವಲ್ಲ. ಈಗ ಹೊರ ರಾಜ್ಯದಿಂದ ಮಧ್ಯವರ್ತಿಗಳ ಮೂಲಕ ಯಂತ್ರದಿಂದ ಬೆಳೆ ಕೊಯ್ಯುಸುತ್ತಿದ್ದೇವೆ. ಆದರೆ ಸಮಯಕ್ಕೆ ಸರಿಯಾಗಿ ಯಂತ್ರಗಳು ಬರದೆ ನಾವು ಕಂಗಾಲಾಗಿದ್ದೇವೆ. ಒಂದು ಪಕ್ಷ ಯಂತ್ರ ಬಾರದಿದ್ದಲ್ಲಿ ದುಬಾರಿ ಕೂಲಿ ಕೊಟ್ಟು ಕೆಲಸ ಮಾಡಬೇಕಾಗುತ್ತದೆ. ಆದರೆ ನಮಗೆ ಅದರಲ್ಲಿ ಏನೂ ಪ್ರಯೋಜನ ಸಿಗಲಾರದು ಎಂದು ಹೇಳುತ್ತಾರೆ ಇಲ್ಲಿನ ಕೃಷಿಕರು.