ಮಂಗಳೂರು, ಜ 15 ( DaijiworldNews/MS): ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೊ) ಹಾಗೂ ಎಫ್ ಟಿ ಎಸ್ ಸಿ 1 ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ಬಿಜೈ ಕಾಪಿಕಾಡು ನಿವಾಸಿ ಶೇಖರ ಆಲಿಯಾಸ್ ಜೆ.ಡಿ.ಚಂದ್ರ ಶೇಖರ್ ಶಿಕ್ಷೆಗೊಳಗಾದವನು.
ಈತ 2022 ರ ಜೂ.21ರಂದು ಬೆಳಗ್ಗೆ ಹ್ಯಾಟ್ ಹಿಲ್ ಜಡ್ಜಸ್ ಕ್ವಾಟ್ರರ್ಸ್ ಪಾರ್ಕಿಂಗ್ ಸ್ಥಳದಲ್ಲಿ ಪೈಂಟಿಂಗ್ ಮಾಡುತ್ತಿದ್ದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ಉಪನಿರೀಕ್ಷಕಿ ಶೀಕಲಾ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಪೋಕ್ಸೋ ಕಾಯಿದೆಯ ಕಲಂ8 ರಂತೆ 5 ವರ್ಷ ಸಾದಾ ಸಜೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ಜ.13 ರಂದು ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆಯೂ ಅದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.