ಕುಂದಾಪುರ, ಮಾ 10(SM): ಮರಳು ಸಮಸ್ಯೆ ಬಗೆಹರಿಸಿ ಇಲ್ಲ ಮತದಾನ ಬಹಿಷ್ಕರಿಸುತ್ತೇವೆ ಎಂದು ಕುಂದಾಪುರದ ಸಾಸ್ತಾನ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಬ್ಯಾನರ್ ಅಳವಡಿಸಿ ಸಾಸ್ತಾನ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಾಸ್ತಾನದ ಸಾಮಾಜಿಕ ಹೋರಾಟಗಾರ ಐರೋಡಿ ವಿಠಲ್ ಪೂಜಾರಿ ಕಳೆದ ನಾಲ್ಕೈದು ವರ್ಷಗಳಿಂದ ತಲೆದೊರಿರುವ ಮರಳು ಸಮಸ್ಯೆಗೆ ಕಟ್ಟಡ ಕಾರ್ಮಿಕರಿಂದ ಹಿಡಿದು ಪ್ರತಿಯೊಂದು ವ್ಯವಹಾರಗಳಿಗೆ ಬಾರಿ ತೊಂದರೆಯಾಗುತ್ತಿದೆ. ಬಡವರ ಹಾಗೂ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಸಾವಿರಾರು ರೂಪಾಯಿಗಳನ್ನು ಕೊಟ್ಟು ಅನಧಿಕೃತ ಮರಳಿಗೆ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿದರು.
ಈ ಕೂಡಲೆ ಮರಳಿನ ಅಭಾವವನ್ನು ಸರಳಿಕರಿಸಿ ಯಾವುದೇ ಷರತುಗಳನ್ನು ನೀಡದೆ ಹಿಂದೆ ಇದ್ದ ಮರಳು ನೀತಿ ಜಾರಿಗೊಳಿಸಿ ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಮತದಾನ ಬಹಿಷ್ಕರಿಸುತ್ತೇವೆ. ಮನೆ ಮನೆಗಳಿಗೆ ತೆರಳಿ ಮತದಾನ ನಿರಾಕರಣೆ ಆಂದೋಲನ, ಗ್ರಾಮಮಟ್ಟದಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳುತ್ತೇವೆ ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯಿಸುತ್ತದೆ ಎಂದು ಗುಡುಗಿದರು.
ಶ್ರಮಿಕ ವರ್ಗದ ಉದ್ಯೋಗ ಕಸಿದುಕೊಂಡ ಮರಳು ಸಮಸ್ಯೆ ಇತ್ಯರ್ಥವಾಗುವ ತನಕ ಮತದಾನ ಬಹಿಷ್ಕಾರ ಎಂಬ ಬೃಹತ್ ಬ್ಯಾನರ್ ಶನಿವಾರ ಸಾಸ್ತಾನ ಮುಖ್ಯ ಪೇಟೆಯಲ್ಲಿ ಅಳವಡಿಸಿದ್ದು ರವಿವಾರ ಐರೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅದನ್ನು ಲೈಸನ್ಸ್ ಪಡೆಯದ ಹಿನ್ನಲ್ಲೆಯಲ್ಲಿ ಅಲ್ಲಿಂದ ತೆರವುಗೊಳಿಸಿದ್ದಾರೆ.