ಉಳ್ಳಾಲ, ಜ 14 (DaijiworldNews/DB): ನಿಷೇಧಿತ ಎಂಡಿಎಂಎ ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್ನಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ 95 ಸಾವಿರ ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಳ್ಳಾಲದ ಆಝಾದ್ನಗರ 1ನೇ ಕ್ರಾಸ್ನ ಮೊಹಮ್ಮದ್ ಖಾಲಿದ್ (39), ಹಾಗೂ ಮಂಜೇಶ್ವರದ ಲಿಖಿತ್ (21) ಬಂಧಿತರು. ಇಬ್ಬರೂ ಡಿಯೊ ಸ್ಕೋಟರ್ನಲ್ಲಿ ತಲಪಾಡಿಯಿಂದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ್ ಕಡೆಗೆ ಎಂಡಿಎಂಎ ಹೊಂದಿರುವ ಪಾಕೆಟ್ ಸಮೇತ ಹೋಗುತ್ತಿದ್ದ ಸಮಯದಲ್ಲಿ ಉಳ್ಳಾಲ ಪೊಲೀಸರು ಸ್ಕೂಟರ್ನ್ನು ಅಡ್ಡಗಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
20 ಸಾವಿರ ರೂ. ಮೌಲ್ಯದ 10 ಗ್ರಾಂ ಎಂಡಿಎಂಎ, 50 ಸಾವಿರ ರೂ. ಬೆಲೆ ಬಾಳುವ ಸ್ಕೂಟರ್ ಹಾಗೂ 25 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಗಾಂಜಾ ಮಾರಾಟದ ಪ್ರಕರಣಗಳಿವೆ.
ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ರೇವಣ್ಣ ಸಿದ್ದಪ್ಪ, ಪ್ರದೀಪ್ ಟಿ.ಆರ್., ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಶೋಕ, ಅಕ್ಬರ್, ಸಾಗರ, ವಾಸುದೇವ, ಸತೀಶ್, ಚಿದಾನಂದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.