ಕುಂದಾಪುರ, ಜ 14 (DaijiworldNews/DB): ಎರಡು ದಿನಗಳ ಹಿಂದೆ ಉಡುಪಿಯ ಸಭೆಯಲ್ಲಿ ಕೊಂಕಣ ರೈಲ್ವೆ ಅವ್ಯವಸ್ಥೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಾ, ಉಡುಪಿ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರ ಸತತ ಬೇಡಿಕೆಯಾದ ಕೊಂಕಣ ನಿಗಮವನ್ನು ಬಂದ್ ಮಾಡಿ ಅದನ್ನು ಭಾರತೀಯ ರೈಲ್ವೆಯ ಜತೆ ವಿಲೀನ ಮಾಡುವ ಬೇಡಿಕೆಯನ್ನು ಉಚ್ಚರಿಸಿದ ಸಂಸದೆ ಶೋಬಾ ಕರಂದ್ಲಾಜೆಯವರ ಹೇಳಿಕೆಯನ್ನು ಕುಂದಾಪುರ ಉಡುಪಿ ನಾಗರೀಕರು ಹಾಗು ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಸ್ವಾಗತಿಸಿ, ಸಂಸದರಿಗೆ ತನ್ನ ಸಹಮತ ತಿಳಿಸಿದೆ.
ಇಡೀ ದೇಶದ ಇಂಚಿಂಚು ಹಳಿಗಳು ಡಬ್ಲಿಂಗ್ ಆಗುತ್ತಾ ವೇಗ, ,ಸೇವೆ, ಆಧುನಿಕತೆಗೆ ತೆರದುಕೊಳ್ಳುತ್ತಾ ಭಾರತೀಯ ರೈಲ್ವೆ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿದ್ದರೆ, ಕೊಂಕಣ ನಿಗಮ ಮಾತ್ರ ಕಳೆದ 30 ವರ್ಷಗಳಲ್ಲಿ ಕನಿಷ್ಟ ನೀರು ತುಂಬುವ ಸೌಲಭ್ಯವನ್ನೂ ನಿರ್ಮಾಣ ಮಾಡದೇ, ಯಾವುದೇ ಬೇಡಿಕೆ ಬಂದರೂ ತಾವು ಹಣಕಾಸಿನ ಕಷ್ಟದಲ್ಲಿ ರೈಲು ಓಡಿಸುತಿದ್ದೇವೆ ಎಂಬ ಸಬೂಬು ಹೇಳುವುದನ್ನೇ ಕಾಯಕ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಉತ್ತರ ಕನ್ನಡದ ಬಳಕೆದಾರರು ಕಷ್ಟದಲ್ಲಿ ನಡೆಸುವ ನಿಗಮ ಭಾರತೀಯ ರೈಲ್ಬೇ ಜತೆ ವಿಲೀನವಾಗಲಿ ಮತ್ತು ದೇಶದ ಉಳಿದೆಡೆ ಸಿಗುವ ಸೌಲಭ್ಯಗಳು ನಮಗೂ ಸಿಗುವಂತಾಗಲಿ ಎಂದೇ ಹೋರಾಟ ಮಾಡುತಿದ್ದಾರೆ. ಜನರ ಈ ಭಾವನೆಗಳಿಗೆ ಸಂಸದರು ಹೇಳಿಕೆ ನೀಡಿದ್ದು, ಸಂಸದರಿಗೆ ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಸಹಮತ ಸೂಚಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ರೈಲ್ವೇ ಸಚಿವರೂ ಕೂಡಾ ಕೊಂಕಣ ನಿಗಮ ಭಾರತೀಯ ರೈಲ್ವೇ ಜತೆ ವಿಲೀನವಾಗುವುದೇ ಸರಿ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾರ್ವಜನಿಕರು ಸಂಸದರ ಹೇಳಿಕೆಗೆ ಸಹಮತದ ಹೇಳಿಕೆ ನೀಡುತ್ತಿರುವುದು ಕಂಡು ಬಂದಿದ್ದು, ಇದು ಜಿಲ್ಲೆಯ ಜನರಲ್ಲಿ ರೈಲು ಬಳಕೆಯ ಬಗ್ಗೆ ಬಂದ ಜಾಗೃತಿಯಾಗಿದೆ ಎಂದು ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ತಿಳಿಸಿದ್ದಾರೆ.
30 ವರ್ಷಗಳ ಹಿಂದೆ ಹತ್ತು ವರ್ಷಗಳ ಅವDiಗಾಗಿ ನಿರ್ಮಾಣವಾದ ಕೊಂಕಣ ರೈಲ್ವೆ ಜನರಿಗೆ ಸೇವೆ ನೀಡುತ್ತಾ ತನ್ನ ಸಾಲ ತೀರಿಸಿ ಭಾರತೀಯ ರೈಲ್ವೆ ಜತೆ ವಿಲೀನವಾಗುವ ಗುರಿಯಿಡಲಾಗಿತ್ತು. ಆದರೆ 30 ವರ್ಷಗಳಲ್ಲಿ ಸಾಲದ ಅಥವಾ ಆರ್ಥಿಕ ನೆಪಗಳನ್ನು ನೀಡುತ್ತಾ ಜನರ ಯಾವ ಬೇಡಿಕೆಗೂ ಒಮ್ಮೆಲೇ ಬೆಂಬಲ ಕೊಡದೇ ಕರ್ನಾಟಕವನ್ನು ತೀವ್ರವಾಗಿ ನಿರ್ಲಕ್ಷ್ಯ ಮಾಡಿರುವ ಕೊಂಕಣ ನಿಗಮ ಇನ್ನು ಮುಂದೆಯೂ ಕೂಡಾ ಡಬ್ಲಿಂಗ್ ಕಾಮಗಾರಿಗಳನ್ನು ನಡೆಸುವುದು ಅನುಮಾನಸ್ಪದ ಎನ್ನಲಾಗಿದೆ. ಕರಾವಳಿ ಮುಂದಿನ ಹಲವು ದಶಕಗಳವರೆಗೆ ಸಿಂಗಲ್ ಲೈನ್ ಮಾರ್ಗವಾಗಿಯೇ ಇರಲಿದ್ದು, ಜನರ ಯಾವ ಬೇಡಿಕೆಯೂ ಈಡೇರುವ ಸಾಧ್ಯತೆ ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಅದರಲ್ಲೂ ಕರಾವಳಿ ಸಂಸದರು ಈ ವಿಷಯವನ್ನು ರೈಲ್ವೆ ಸಚಿವರು ಹಾಗೂ ಪ್ರಧಾನ ಮಂತ್ರಿಗಳ ಗಮನಕ್ಕೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.