ಬಂಟ್ವಾಳ, ಜ 13 (DaijiworldNews/HR): ಹಿಂದೂ ಕಾರ್ಯಕರ್ತ ರಾಜೇಶ್ ನ ಸಾವಿನ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಸ್ಪಷ್ಟವಾದ ಕಾರಣ ಇನ್ನೂ ಸಿಕ್ಕಿಲ್ಲ ಎಂಬ ಮಾಹಿತಿ ಪೋಲೀಸ್ ಇಲಾಖೆಯಿಂದ ಲಭ್ಯವಾಗಿದೆ.
ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಳಿಕ ಹಾಗೂ ಪೋಲೀಸರ ತನಿಖೆಯಿಂದ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದ್ದು, ವರದಿಗಾಗಿ ಕಾಯಬೇಕಾಗಿದೆ.
ಪಾಣೆಮಂಗಳೂರು ಹಳೆಯ ಸೇತುವೆ ಅಡಿ ಭಾಗದಲ್ಲಿ ನೇತ್ರಾವತಿ ನದಿಯಲ್ಲಿ ಸಜೀಪ ನಡು ಗ್ರಾಮದ ಸಾನದ ಮನೆ ರಾಜೇಶ್ ಪೂಜಾರಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು.
ಈತನ ದ್ವಿಚಕ್ರ ವಾಹನ ಸೇತುವೆಯಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು.
ನದಿಯಲ್ಲಿ ಸಿಕ್ಕಿದ ರಾಜೇಶ್ ಪೂಜಾರಿ ಅವರ ಮೃತದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಈ ತನ ಶರ್ಟ್ ನಲ್ಲಿ ಮೋಬೈಲ್ ಪೋನ್ ಹಾಗೂ ಪರ್ಸ್ ಪತ್ತೆಯಾಗಿದ್ದು, ಮೊಬೈಲ್ ಕರೆಯನ್ನು ಪರಿಶೀಲನೆ ನಡೆಸಿ ಬಳಿಕ ಸಾವಿನ ಪ್ರಾಥಮಿಕ ವರದಿಯನ್ನು ಪೋಲಿಸರು ನೀಡಬಹುದು.
ಸದ್ಯ ಯಾವುದೇ ಸುಳಿವು ನೀಡದ ಪೋಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯವಾಗಿ ಇರುವ ಸಿ.ಸಿ.ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿರುವ ಪೋಲೀಸರು, ಎರಡು ದಿನಗಳಲ್ಲಿ ಸ್ಪಷ್ಟವಾದ ಮಾಹಿತಿ ನೀಡಲಿದ್ದಾರೆ.