ಕುಂದಾಪುರ, ಜ 13 (DaijiworldNews/DB): ಉಡುಪಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಜನವರಿ 22ರಂದು ನಡೆಯಲಿದ್ದು ಪಕ್ಷದ 40 ಅಗ್ರಮಾನ್ಯ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚುನಾವಣೆಗೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ಹೇಳಿದ್ದಾರೆ.
ಹೆಮ್ಮಾಡಿ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಮು ಭಾವನೆಯನ್ನು ಕೆರಳಿಸುವುದು, ಬೆಲೆ ಏರಿಕೆ, ಭ್ರಷ್ಟಾಚಾರ, ಬಡವರ ಬದುಕಿನಲ್ಲಿ ಆಟವಾಡುತ್ತಲೇ ಇರುವ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳಿಂದ ರಾಜ್ಯದ ಜನ ಬೇಸೆತ್ತು ಹೋಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಯಿತು. ಕೇರಳದಲ್ಲಿ ಪ್ಯಾಕೇಜ್ ನೀಡಲಾಗುತ್ತದೆ. ಅದೇ ಕರ್ನಾಟಕದಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದರೂ ಕೂಡಾ ಪರಿಹಾರ ನೀಡಲಿಲ್ಲ. ಬಂಡವಾಳಶಾಹಿಗಳನ್ನು ಶ್ರೀಮಂತ ಮಾಡುವುದರಲ್ಲಿಯೇ ಸರ್ಕಾರಗಳು ನಿರತವಾಗಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಅಲ್ಲಿನ ಆಡಳಿತ ಮಂಡಳಿ ಗುಜರಿಗೆ ಹಾಕಿತು. ಸಕ್ಕರೆ ಕಾರ್ಖಾನೆಯ ಅವಶೇಷವೂ ಉಳಿಯದಂತೆ ಮಾಡಿತು. ಇದು ಬಿಜೆಪಿ ಆಡಳಿತದ ಕೊಡುಗೆ. ಕಸ್ತೂರಿ ರಂಗನ್ ವರದಿಯ ಆತಂಕ ಇನ್ನೂ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರದ ಬಳಿ ಪರಿಹಾರವಿಲ್ಲ. ಕರಾವಳಿಯಲ್ಲಿ ನಡೆದ ಕೊಲೆಗಳಲ್ಲಿ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ, ಯಡಮೊಗೆಯ ಉದಯ ಗಾಣಿಗ ಕೊಲೆಯಲ್ಲಿ ಆರೋಪಿಗಳು ಬಿಜೆಪಿಯ ಪ್ರಭಾವಿಗಳೇ ಆಗಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ನಲ್ಲಿ ಯಾವುದೇ ಬಣಗಳಿಲ್ಲ. ಬೂತ್ ಮಟ್ಟದಿಂದಲೇ ಪಕ್ಷ ಸದೃಢವಾಗಿದೆ. ಬೈಂದೂರು ಬ್ಲಾಕ್ನಲ್ಲಿ ಈಗಾಗಲೇ ಬೂತ್ ಮಟ್ಟದ ಸಭೆಗಳು ಪೂರ್ಣಗೊಳ್ಳುವ ಹಂತ ತಲುಪಿವೆ. ಮುಂದೆ 30 ಮನೆಗೊಂದು ಗ್ರಾಮೀಣ ಸಭೆ ನಡೆಸಿ, ಪರಿಣಾಮಕಾರಿಯಾಗಿ ಪಕ್ಷ ಮತದಾರರ ಹತ್ತಿರ ಹೋಗುವ ಕೆಲಸ ಮಾಡಲಿದೆ ಎಂದರು.
ಉಡುಪಿಯಲ್ಲಿ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಬೈಂದೂರು, ವಂಡ್ಸೆ ಬ್ಲಾಕ್ನಿಂದ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ತಲ್ಲೂರಿನಿಂದ ರ್ಯಾಲಿಯ ಮೂಲಕ ಉಡುಪಿಯನ್ನು ತಲುಪಲಿದ್ದೇವೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ರಾಜ್ಯ ಕಾಂಗ್ರೆಸ್ನಲ್ಲಿ ಯಾವುದೇ ಬಿರುಕಿಲ್ಲ. ಎಲ್ಲ ನಾಯಕರು ಒಟ್ಟಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಸಂಚಾರ ಮಾಡಲಿದೆ. ಉಡುಪಿಯ ಕಾರ್ಯಕ್ರಮದಲ್ಲಿ 25 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ. 99ರಷ್ಟನ್ನು ಕಾರ್ಯರೂಪಕ್ಕೆ ತಂದಿದ್ದರು. ಬಿಜೆಪಿ ಸರ್ಕಾರ ಚುನಾವಣಾ ಪೂರ್ವ ನೀಡಿದ 600 ಆಶ್ವಾಸನೆಗಳಲ್ಲಿ 100ನ್ನೂ ಈಡೇರಿಸಿಲ್ಲ. ಬಿಜೆಪಿ ಇವತ್ತು ಸುಳ್ಳು ಹೇಳಿಯೇ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಘುರಾಮ ಶೆಟ್ಟಿ, ರಾಜು ಪೂಜಾರಿ, ದೇವಾನಂದ ಶೆಟ್ಟಿ, ಡಾ. ಯಾದವ್, ಐಟಿ ಸೆಲ್ನ ರೋಶನ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಪಾಂಡು, ಜಯರಾಮ, ನಾಗಪ್ಪ ಕೊಠಾರಿ, ವಂಡಬಳ್ಳಿ ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಅನಂತ ಮೊವಾಡಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ ವಂದಿಸಿದರು.