ಸುಳ್ಯ, ಜ 13 (DaijiworldNews/DB): ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಜನವರಿ 13ರ ಶುಕ್ರವಾರ ಸುಳ್ಯ ತಾಲೂಕಿನ ಗೌಡ ಸಮುದಾಯ ಭವನದಲ್ಲಿ ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಫ್ರೀಡಂ ಆ್ಯಪ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸಲು ಹಾಗೂ ಆರ್ಥಿಕ ಭದ್ರತೆ ನೀಡಲು ಮತ್ಸ್ಯ ಸಂಪದ ಯೋಜನೆಯಡಿ ಮೀನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು, ತಾಲೂಕು, ಗ್ರಾಮ ಮಟ್ಟದಲ್ಲಿ ಮೀನುಗಾರಿಕೆಯಲ್ಲಿ ಆಸಕ್ತಿ ಇರುವ ರೈತರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಾನ್ಮುಖವಾಗಿದೆ. ಆ ದಿಸೆಯಲ್ಲಿ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಭಾಗದಲ್ಲಿ ಮಡಂಜಿ ಮತ್ತು ಮಲಂಜಿ ಮೀನುಗಳನ್ನು ಉತ್ಪಾದನೆ ಮಾಡಲು ಹೆಚ್ಚಿನ ಒತ್ತು ನೀಡಲಾಗಿದ್ದು, ಈ ಮೀನಿನ ತಳಿಯನ್ನು ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗಿದೆ. ಮಡಂಜಿ ಮತ್ತು ಮಲಂಜಿ ಮೀನುಗಳಿಗೆ ಔಷಧಿಯ ಗುಣಗಳಿದ್ದು, ಇದು ಹೆಚ್ಚಿನ ಲಾಭದಾಯಕ ಮೀನುಗಳಾಗಿವೆ. ಇದರ ಉತ್ಪಾದನೆಯಲ್ಲಿ ಈ ಭಾಗದ ರೈತರು ಹೆಚ್ಚಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಕಡೆಯಿಂದ ಮೀನುಗಾರರಿಗೆ ಮೀನು ಖರೀದಿಗೆ ಕ್ರಮ ವಹಿಸಲಾಗಿದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ನೇರವಾಗಿ ಮೀನು ಹಿಡಿಯುವರಿಂದ ಮೀನು ಖರೀದಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ, ಈ ಭಾಗದಲ್ಲಿ ರೈತರು ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ತಮ್ಮ ಅಡಿಕೆ ತೋಟದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮೀನು ಸಾಕಾಣಿಕೆ ಮಾಡಬಹುದಾಗಿದೆ. ಅಡಿಕೆ ಬೆಳೆಯೊಂದಿಗೆ ಮೀನು ಸಾಕಾಣಿಕೆ ಮೂಲಕ ಆರ್ಥಿಕವಾಗಿ ಸಫಲರಾಗಬಹುದಾಗಿದೆ. ಮೀನು ಸಾಕಾಣಿಕೆಯು ಉದ್ಯೋಗವೆಂದು ಭಾವಿಸಿ ಅದರಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಸಚಿವರನ್ನು ಈ ವೇಳೆ ಸನ್ಮಾನಿಸಲಾಯಿತು. ಅರ್ಹ ರೈತರಿಗೆ ಮೀನು ಮರಿಗಳನ್ನು ಸಚಿವರು ವಿತರಿಸಿದರು.
ಮೀನುಗಾರಿಕೆ ನಿರ್ದೇಶನಾಲಯದ ಅಪರ ನಿರ್ದೇಶಕ (ಕರಾವಳಿ) ದಿನೇಶ್ ಕುಮಾರ್, ಮೀನುಗಾರಿಕೆ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶಿವಕುಮಾರ ಮಗದ, ಫ್ರೀಡಂ ಆಪ್ ಸಂಸ್ಥಾಪಕ ಸುಧೀರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಸುಶ್ಮಿತ ರಾವ್, ಸಹಾಯಕ ನಿರ್ದೇಶಕ ದಿಲೀಪ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಪ್ರಸ್ತಾವನೆಗೈದರು.