ಉಡುಪಿ, ಜ 13 (DaijiworldNews/DB): ಸ್ಯಾಂಟ್ರೋ ರವಿಯ ಬಂಧನವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಚಿತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ ಅವರು,11 ದಿನಗಳ ನಂತರ ಸ್ಯಾಂಟ್ರೋ ರವಿ ಬಂಧನವಾಗಿದೆ. ಗುಜರಾತ್ನಲ್ಲಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾಲ್ಕೈದು ತಂಡ ರಚಿಸಿ ಮೈಸೂರು ರಾಮನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಪೊಲೀಸರ ವಿಶೇಷ ಪ್ರಯತ್ನದಿಂದ ಸ್ಯಾಂಟ್ರೋ ರವಿ ಬಂಧನವಾಗಿದೆ. ಎಲ್ಲಾ ಪ್ರೊಸೀಜರ್ ಮುಗಿಸಿಕೊಂಡು ಆತನನ್ನು ಬೆಂಗಳೂರಿಗೆ ಕರೆ ತರಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದ ಮೇಲೆ ಎಲ್ಲಾ ರೀತಿಯ ಟೀಕೆಗಳು ಇತ್ತು. ಸರ್ಕಾರ ಮೀನ ಮೇಷ ಎಣಿಸುತ್ತಿದೆ, ಒತ್ತಡ ಇದೆ ಎನ್ನುತ್ತಿದ್ದರು. ಸರಕಾರದ ಮೇಲೆ ಯಾವ ಒತ್ತಡವು ಇರಲಿಲ್ಲ. ನಾವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ ಹೇಗೆ ಇದ್ದರೂ ಕರೆ ತಂದು ವಿಚಾರಿಸಬೇಕೆಂದು ಹೇಳಿದ್ದೆವು. ಆತ ನಡೆಸಿದ ಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗಬೇಕು ಎಂದರು.
ಗುಜರಾತ್ನಲ್ಲಿ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸುತ್ತಾರೆ. ನಂತರ ಆತನನ್ನು ಕರೆ ತರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಸಂಜೆ ಅಥವಾ ನಾಳೆ ಆತನನ್ನು ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ ಎಂದವರು ತಿಳಿಸಿದರು.
ಎರಡು ಮೂರು ಕಡೆ ಅಂತಿಮ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತದೆ. ಏನೇ ಇದ್ದರೂ ಅಡಗಿಸಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತದೆ. ಆತ ನಡೆಸಿದ ಎಲ್ಲ ಕೃತ್ಯಕ್ಕೆ ಶಿಕ್ಷೆಯಾಗುತ್ತದೆ. ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ. ಆತನ ಜೊತೆಗೆ ಇರುವವರನ್ನು ಕೂಡ ಬಂಧಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಸದ್ಯ ರವಿ ಬಂಧನವಾಗಿದೆ. ಹೆಚ್ಚಿನ ವಿವರಣೆ ನೀಡಲು ಹೋಗುವುದಿಲ್ಲ ಪೊಲೀಸರು ಈ ಬಗ್ಗೆ ವಿವರ ನೀಡುತ್ತಾರೆ. ನಿನ್ನೆ ನಾನು ಕೂಡ ಅಹಮದಾಬಾದ್ನಲ್ಲಿ ಇದ್ದದ್ದು ಕಾಕತಾಳಿಯವಷ್ಟೇ ಎಂದರು.