ಉಡುಪಿ, ಜ 13 (DaijiworldNews/DB): ಅಡಿಕೆ ಬೆಳೆಗಾರರ ಜೊತೆಗೆ ನಾನು ಇದ್ದೇನೆ.ಸರ್ಕಾರ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬಾರದು ಎಂಬುದಾಗಿ ವಿಧಾನಸಭೆಯಲ್ಲಿ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಂಪರಾಗತವಾಗಿ ಬೆಳೆಯುವ ಕರಾವಳಿ ಮಲೆನಾಡಿನಲ್ಲಿ ಮಾತ್ರ ಅಡಿಕೆ ಬೆಳೆಯುತ್ತಾರೆ. ಆದರೆ ಈಗ ಜಾಗತಿಕ ಬ್ಯಾಂಕುಗಳಲ್ಲಿ ಎಣ್ಣೆ ಕಾಳು ಬೆಳೆಯುತ್ತೇವೆ, ಆಹಾರ ಬೆಳೆಯುತ್ತೇವೆ ಎಂಬುದಾಗಿ ಸಾಲ ತಂದು ಡ್ಯಾಂ ಕಟ್ಟಿ ಬಯಲು ಸೀಮೆ ಭಾಗದಲ್ಲೂ ಅಡಿಕೆ ಬೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡಿ ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡಿಸುವ ಅವಶ್ಯಕತೆ ಇಲ್ಲ ಎಂದಿದ್ದೇನೆ ಎಂದು ತಿಳಿಸಿದರು.
ವರ್ಷಕ್ಕೆ ಒಂದು ಕೋಟಿ ಅಡಿಕೆ ಸಸಿ ಮಾರಾಟವಾಗುತ್ತದೆ. ಆಂಧ್ರಪ್ರದೇಶದಲ್ಲಿಎರಡು ಸಾವಿರ ಎಕರೆಯಲ್ಲಿ ಈಗಾಗಲೇ ಫಸಲು ಬರುವುದಕ್ಕೆ ಶುರುವಾಗಿದೆ. ಹಾಗಾದರೆ ಅಡಿಕೆ ದರ ಎಷ್ಟು ದಿನ ನಿಲ್ಲಬಹುದು? ಎಂದವರು ಪ್ರಶ್ನಿಸಿದರು.
ಅಡಿಕೆಯನ್ನು ಜಗಿದು ಉಗಿಯೋದು ಬಿಟ್ಟರೆ ಬೇರೆ ಯಾವುದೇ ಪರ್ಯಾಯ ಉಪಯೋಗಕ್ಕೆ ಬಳಸಲು ಆಗುತ್ತಿಲ್ಲ. ಅಡಿಕೆಗೆ ಬಂದ ದರ ಅಡಿಕೆಗೆ ಶಾಪ ಆಗಿದೆ. ಕಾಂಗ್ರೆಸ್ ಸರ್ಕಾರ ಕಾಲದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಅಡಿಕೆಯಲ್ಲಿ ಕ್ಯಾನ್ಸರ್ ಅಂಶ ಇದೆ ಎಂಬುದಾಗಿ ಹೇಳಲಾಗಿತ್ತು. ಅದನ್ನು ತೆಗೆಯಬೇಕಾಗಿದೆ, ಹೀಗಾಗಿ ಅಡಿಕೆ ಗೊಂದಲದಲ್ಲಿ ಇದೆ. ರೈತರು ಲಾಭದಾಯಕ ಬೆಳೆ ಬೆಳೆಯುತ್ತಾರೆ, ನಾವೇನು ಮಾಡಲು ಆಗುವುದಿಲ್ಲ. ಆದರೆ ಸರ್ಕಾರದ ಪ್ರೋತ್ಸಾಹದಿಂದ ಹೊಸ ತೋಟ ಆಗುವ ಅವಶ್ಯಕತೆ ಇಲ್ಲ ಎಂದವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.