ಉಡುಪಿ, ಜ 13 (DaijiworldNews/DB): ಮುಂದಿನ ಒಂದೆರಡು ದಿನಗಳಲ್ಲಿ ಸ್ಯಾಂಟ್ರೋ ರವಿಯ ಬಂಧನವಾಗುತ್ತದೆ. ಆತ ಯಾವ ಬಿಲದಲ್ಲಿ ಹೊಕ್ಕಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಆತ ಎಲ್ಲಿದ್ದರೂ ಬಿಡುವುದಿಲ್ಲ. ಶೀಘ್ರ ಆತನ ಬಂಧನ ಆಗಲಿದೆ. ಆತನ ಸುಳಿವು ಸಿಕ್ಕಿರುವುದರಿಂದ ಮುಂದಿನ ಒಂದೆರಡು ದಿನಗಳಲ್ಲೇ ಬಂಧನ ಮಾಡಲಾಗುವುದು. ಸೂಕ್ತ ಕಾನೂನು ಕ್ರಮವನ್ನು ಆತನ ಮೇಲೆ ಕೈಗೊಳ್ಳಲಾಗುವುದು ಎಂದರು.
ಆತ ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಾನೆ. ಇಪ್ಪತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಗೊತ್ತಾಗಿದೆ. ಮೈಸೂರಿನಲ್ಲಿ ಆತನ ವಿರುದ್ದ ರೌಡಿ ಲಿಸ್ಟ್ ಇದೆ, ಗೂಂಡಾ ಆಕ್ಟ್ ಕೂಡಾ ಹಾಕಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.
ನನ್ನ ಜೊತೆ ಆತ ಫೋಟೋ ತೆಗೆಸಿಕೊಂಡಿರಬಹುದು. ಹಲವಾರು ಮಂದಿ ಬರುತ್ತಾರೆ. ಸಿನಿಮಾ ನಟರಂತೆಯೇ ನಮ್ಮ ಗ್ರೇಡ್ ಆಗಿದೆ. ಜನ ಪ್ರೀತಿಯಿಂದ ಹತ್ತಿರ ಬಂದು ಫೋಟೋ ತೆಗೆಸಿಕೊಳ್ಳುವಾಗ ಬೇಡ ಹೇಳಲಾಗುವುದಿಲ್ಲ. ಆಹೆಯೇ ಸ್ಯಾಂಟ್ರೋ ರವಿಯೂ ತೆಗೆಸಿಕೊಂಡಿರಬಹುದು ಎಂದವರು ಪ್ರತಿಕ್ರಿಯಿಸಿದರು.