ಉಳ್ಳಾಲ,ಜ 13 ( DaijiworldNews/MS): ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪ್ರತಿವರ್ಷವೂ ಹಮ್ಮಿಕೊಳ್ಳುವ ವೀರರಾಣಿ ಅಬ್ಬಕ್ಕ ಉತ್ಸವವನ್ನು ಈ ಬಾರಿ ಸರಕಾರದ ಯಾವುದೇ ಪ್ರಾಯೋಜಕತ್ವ ಹಾಗೂ ಅನುದಾನವಿಲ್ಲದೆ ಫೆ.4 ಶನಿವಾರ ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಆಚರಿಸುವುದಾಗಿ ನಿರ್ಣಯಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಕುತ್ತಾರು ಸಮೀಪ ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 1997ರಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ಪ್ರಾರಂಭಗೊಂಡು ಹಲವು ವರ್ಷ ಸಾರ್ವಜನಿಕ ದೇಣಿಗೆಯಿಂದ ಹಾಗೂ ಹಲವು ಸಂದರ್ಭಗಳಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ವೀರರಾಣಿ ಅಬ್ಬಕ್ಕ ಉತ್ಸವವನ್ನು ಉಳ್ಳಾಲ ಪರಿಸರದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದೆ. 2021ರ ವೀರರಾಣಿ ಅಬ್ಬಕ್ಕ ಉತ್ಸವವನ್ನು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ತುಳು ಅಕಾಡೆಮಿಯ ಸಹಯೋಗದೊಂದಿಗೆ ವಿಜೃಂಭಣೆಯಿಂದ ಆಚರಿಸಿತ್ತು. 2022 ರಲ್ಲಿ ಸರಕಾರದ ಅನುದಾನದ ಕೊರತೆಯಿಂದ ಅಚರಿಸಲು ಅಸಾಧ್ಯವಾಗಿದೆ.
ಅಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ, ಈ ಬಾರಿ ಜಿಲ್ಲಾಡಳಿತಕ್ಕೆ ಅಬ್ಬಕ್ಕ ಉತ್ಸವ ಆಚರಿಸಲು ರೂ. 10 ಲಕ್ಷ ಅನುದಾನ ಖಜಾನೆಗೆ ಬಂದಿದೆ. ಸಮಿತಿ ಪ್ರತಿಬಾರಿಯೂ ಜಿಲ್ಲಾಡಳಿತವನ್ನು ಪ್ರಶ್ನಿಸಿದಾಗ ಸಭೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸುತ್ತಾ ಬಂದಿದ್ದಾರೆ. ಇದರಿಂದ 1 ವರ್ಷ ಅಬ್ಬಕ್ಕ ಉತ್ಸವವೇ ನಡೆದಿಲ್ಲ. ಈ ಬಾರಿ ಉತ್ಸವ ನಡೆಸುವುದಾಗಿ ತೀರ್ಮಾನಿಸಿ ವಿದ್ಯಾರ್ಥಿಗಳ ಪರೀಕ್ಷೆಗಳೂ ಸಮೀಪಿಸುವ ಮುನ್ನ ಉತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಒಂದು ದಿನದ ಕಾರ್ಯಕ್ರಮವಾಗಿದ್ದು ಬೆಳಿಗ್ಗೆಯಿಂದ ಪ್ರಾರಂಭವಾಗಿ ರಾತ್ರಿಯವರೆಗೆ ನಡೆಯಲಿರುವುದು. ಈ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿಕನ್ನಡ, ತುಳು, ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರಗೋಷ್ಠಿ, ಅಬ್ಬಕ್ಕ ಪ್ರಶಸ್ತಿ / ಅಬ್ಬಕ್ಕ ಪುರಸ್ಕಾರ, ನಾಟಕ, ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮವನ್ನು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಮ್.ಎನ್ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ಕುಮಾರ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ಕಟೀಲ್, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವರಾದ ಯು.ಟಿ.ಖಾದರ್ ಹಾಗೂ ಇತರಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಉಳ್ಳಾಲ ನಗರಸಭೆಯ ತೊಕ್ಕೊಟ್ಟಿನ ಹೊಸ ಬಸ್ಸ್ಟಾಂಡ್ ಹತ್ತಿರವಿರುವ 41 ಸೆಂಟ್ಸ್ ಜಾಗದಲ್ಲಿಅಬ್ಬಕ್ಕ ಭವನ ನಿರ್ಮಿಸಲು ಶಂಕುಸ್ಥಾಪನೆ ಮಾಡಿ 11 ವರ್ಷಗಳು ಕಳೆದರೂ ಇನ್ನು ಕೂಡಾ ಅಬ್ಬಕ್ಕ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸದಕ್ಕೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವಿಷಾದ ವ್ಯಕ್ತಪಡಿಸಿದೆ. ಈಗಾಗಲೇ ಹೊಸ ಜಿಲ್ಲಾಧಿಕಾರಿಯವರನ್ನು ಉಳ್ಳಾಲ ವೀರರಾಣಿ ಅಬ್ಬಕ್ಕ ಸಮಿತಿಯು ಭೇಟಿ ಮಾಡಿ ಕೂಡಲೇ ಅಬ್ಬಕ್ಕ ಭವನ ಪ್ರಾರಂಭಿಸುವಂತೆ ಮನವಿಯನ್ನು ಮತ್ತೆ ಸಲ್ಲಿಸಿದೆ. ಕಳೆದ 27 ವರ್ಷಗಳಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ವಸಾಹತು ಶಾಹಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಹೆಸರನ್ನು ಇಡುವಂತೆ ಒತ್ತಾಯಿಸುತ್ತಾ ಬಂದಿದೆ. ಇದರ ಬಗ್ಗೆ ಇಷ್ಟರವರೆಗೆ ಸರಕಾರವು ಯಾವುದೇ ಕ್ರಮಕೈಗೊಂಡಿರದ ಬಗ್ಗೆ ಮತ್ತೆ ಒತ್ತಾಯಿಸುತ್ತೇವೆ ಎಂದರು.
ಈ ವೇಳೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿಗಟ್ಟಿ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ, ಉಪಾಧ್ಯಕ್ಷರುಗಳಾದ ಯು.ಪಿ. ಆಲಿಯಬ್ಬ, ದೇವಕಿ ಆರ್ ಉಳ್ಳಾಲ್ ಉಪಸ್ಥಿತರಿದ್ದರು.