ಮಂಗಳೂರು, ಜ 13 (DaijiworldNews/DB): ಹಿಮಾಚಲ ಪ್ರದೇಶದಿಂದ ನಿಷೇಧಿತ ಗಾಂಜಾ- ಚರಸ್ಗಳನ್ನು ರೈಲು ಮೂಲಕ ತಂದು ಮಂಗಳೂರಿನ ಉದ್ಯಮಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುಡಾರಿ ಸುಕೇತ್ ಕಾವ (33 ), ಕಾರ್ಕಳ ಆನೆಕೆರೆ ನಿವಾಸಿ ಸುನಿಲ್ (32) ಮತ್ತು ತಮಿಳುನಾಡು ರಾಜ್ಯದ ಕೊಯಂಬತ್ತೂರು ನಿವಾಸಿ ಅರವಿಂದ (24 ) ಬಂಧಿತರು. ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬ ಗುಡ್ಡಗಾಡು ಪ್ರದೇಶದ ಜನರಿಂದ ಕಡಿಮೆ ಹಣಕ್ಕೆ ಗಾಂಜಾ-ಚರಸ್ಗಳನ್ನು ಖರೀದಿ ಮಾಡುತ್ತಿದ್ದರು. ತಾವು ಟ್ರಕ್ಕಿಂಗ್ ಮಾಡುವವರು, ಪ್ರವಾಸಿಗರು, ಪ್ರವಾಸಿ ಗೈಡ್ಗಳು ಎಂದೆಲ್ಲಾ ಆ ಜನರನ್ನು ನಂಬಿಸುತ್ತಿದ್ದರು.
ಅಲ್ಲಿನ ಜನರಿಂದ ಕಡಿಮೆ ಬೆಲೆಗೆ ಖರೀದಿಸಿಕೊಂಡು ರೈಲಿನಲ್ಲಿ ಬಂದು ಮಂಗಳೂರಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಪೂರೈಸಿ ಅವರ ಮೂಲಕ ಸಾರ್ವಜನಿಕರಿಗೆ ಮತ್ತು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಿ ಸುಲಭವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಕಾರ್ಯಾಚರಣೆಗಿಳಿದ ಸೆನ್ ಕ್ರೈಂ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 500 ಗ್ರಾಂ ತೂಕದ ಚರಸ್ ಮತ್ತು 1 ಕೆ.ಜಿ ತೂಕದ ಗಾಂಜಾ, ಇವುಗಳನ್ನು ಸಾಗಾಟಕ್ಕೆ ಬಳಸಿದ ರಿಡ್ಜ್ ಕಾರು ಹಾಗೂ ಮೊಬೈಲ್ ಫೋನ್ಗಳು ಸೇರಿ ಒಟ್ಟು 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.