ಕುಂದಾಪುರ, ಜ 12 (DaijiworldNews/DB): ತೆಂಗಿನ ವಿವಿಧ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ, ತಂತ್ರಜ್ಞಾನಗಳನ್ನು ಬಳಸಿಕೊಂಡು ತೆಂಗು ಬೆಳೆಯನ್ನು ಲಾಭದಾಯಕವನ್ನಾಗಿ ರೂಪಿಸಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ತಲ್ಲೂರಿನ ಶೇಷಕೃಷ್ಣ ಹಾಲ್ನಲ್ಲಿ ತೆಂಗು ಅಭಿವೃದ್ದಿ ಮಂಡಳಿ ಕೊಚ್ಚಿ, ತೋಟಗಾರಿಕಾ ಇಲಾಖೆ, ಜಿ.ಪಂ. ಉಡುಪಿ ಮತ್ತು ಉಕಾಸ ಉತ್ಪಾದಕರ ಕಂಪನಿ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಮತ್ತು ರೈತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆಂಗು ಬೆಳೆಗಾರರು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ರಪ್ತು ಮಾಡಲು ವಿಫುಲವಾದ ಅವಕಾಶವಿದೆ. ತೆಂಗಿನ ಹಾಲು, ಕೋಕೊಪೀಟ್, ಎಣ್ಣೆ ಹೀಗೆ ಮೌಲ್ಯವರ್ಧನೆಗೊಳಿಸಿ ವಿದೇಶಗಳಿಗೆ ರಪ್ತು ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು. ತೆಂಗಿಗೆ ಕಡಿಮೆ ರಾಸಾಯನಿಕ, ಕೀಟನಾಶಕ ಬಳಕೆ ಮಾಡುವುದರಿಂದ ವಿದೇಶಗಳಲ್ಲಿ ಆಹಾರ ಪರೀಕ್ಷೆಗಳಲ್ಲಿಯೂ ಸಮಸ್ಯೆಯಾಗುವುದಿಲ್ಲ. ತೆಂಗು ಬೆಳೆಗಾರರು ಈ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು. ಅದಕ್ಕೆ ತೆಂಗು ಅಭಿವೃದ್ದಿ ಮಂಡಳಿ ಪೂರಕ ಕಾರ್ಯಕ್ರಮಗಳನ್ನು ಜೋಡಣೆ ಮಾಡಿಕೊಳ್ಳಬೇಕು ಎಂದರು.
ಉಡುಪಿ ಕಲ್ಪರಸ ಕೊಕೊನಟ್ ಮತ್ತು ಅಲ್ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿ ಕುಂದಾಪುರ ಇದರ ಸತ್ಯನಾರಾಯಣ ಉಡುಪ ಮಾತನಾಡಿ, ಕೊಬ್ಬರಿಗೆ ನೀಡುವಂತೆ ತೆಂಗಿನ ಕಾಯಿಗೂ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೋತಿಗಳ ಉಪಟಳ, ಹಂದಿಯ ಕಾಟದಿಂದ ತೆಂಗು ಬೆಳೆಗಾರರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ತೆಂಗು ಬೆಳೆಗಾರರ ಪ್ರೋತ್ಸಾಹಿಸಲು ಕಾರ್ಯಕ್ರಮಗಳ ರೂಪಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ವಹಿಸಿದ್ದರು. ಕಾಸರಗೋಡು ಸಿಪಿಸಿಆರ್ಐಯ ಸಸ್ಯ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಹೆಗ್ಡೆ, ಬ್ರಹ್ಮಾವರ ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ್, ಕಾಸರಗೋಡು ಸಿಪಿಸಿಆರ್ಐಯ ಸಸ್ಯ ಶರೀರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೆಬ್ಬಾರ್ ಕೆ.ಬಿ., ಕಾಸರಗೋಡು ಸಿಪಿಸಿಆರ್ಐಯ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿ ಭಟ್, ಎಚ್.ಎಂ ನಾಯಕ್, ನವೀನಚಂದ್ರ ಜೈನ್, ಸೀತಾರಾಮ ಗಾಣಿಗ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತೆಂಗು ಅಭಿವೃದ್ಧಿ ಮಂಡಳಿ ಕೊಚ್ಚಿ ಇಲ್ಲಿನ ಅಭಿವೃದ್ದಿ ಅಧಿಕಾರಿ ಡಾ. ಬಿ. ಹನುಮಂತೇ ಗೌಡ ಸ್ವಾಗತಿಸಿದರು. ಉಡುಪಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ವಂದಿಸಿದರು. ನಿವೃತ್ತ ತೋಟಗಾರಿಕಾ ಅಧಿಕಾರಿ ಸಂಜೀವ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಾಂತ್ರಿಕ ಸಮಾವೇಶ ನಡೆಯಿತು.