ಉಡುಪಿ, ಜ.12 (DaijiworldNews/HR): ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ವಲಯ ಅಥವಾ ಅಗ್ರಿಕಲ್ಚರ್ ಝೋನಲ್ಲಿ ಸಣ್ಣ ಹಿಡುವಳಿದಾರರಿಗೆ(ಭೂ ಮಾಲಕರಿಗೆ) ಸ್ವಂತ ಸೂರನ್ನು ಕಟ್ಟಿಕೊಳ್ಳಲು ವಲಯ ನಿಯಮಾವಳಿಗಳಲ್ಲಿ ಅವಕಾಶ ಇರಲಿಲ್ಲ. ಇದೀಗ ಕೃಷಿ ವಲಯದಲ್ಲಿ10ಸೆಂಟ್ಸು ಜಾಗ ಮತ್ತು 3000 ಚದರ ಅಡಿ ತನಕ ಸ್ವಂತ ಮನೆ ಕಟ್ಟಲು ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಉಡುಪಿ ಶಾಸಕರಾದ ರಘುಪತಿ ಭಟ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು "ಈ ಹಿಂದೆ ನಗರಾಭಿವೃದ್ಧಿ ಇಲಾಖೆ ವಲಯ ನಿಯಮಾವಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ದಿನಾಂಕ 11-01-2023 ರಂದು 10 ಸೆಂಟ್ಸ್ ವರೆಗಿನ ಕೃಷಿ ವಲಯದ ಜಮೀನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ 5 ಸೆಂಟ್ಸ್ ರಿಂದ 7 ಸೆಂಟ್ಸ್ ವರೆಗೆ ಶೇಕಡಾ 45 ಹಾಗೂ 7 ಸೆಂಟ್ಸ್ ರಿಂದ 10 ಸೆಂಟ್ಸ್ ವರೆಗೆ ಶೇಕಡಾ 35 ರ ಮಿತಿಯಲ್ಲಿ ಮತ್ತು 5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂಬ ಅಂಶವನ್ನು ಅಳವಡಿಸಲಾಗಿದೆ. ಉಡುಪಿ ಜನತೆಯ ಬಹು ಬೇಡಿಕೆಯ ಈ ವಿಷಯದ ಬಗ್ಗೆ ಇಲಾಖೆ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿ, ವಿಳಂಬವಾದಾಗ ಅಧಿವೇಶನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಒತ್ತಾಯಿಸಿದಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರು ನೀಡಿದ್ದರು. ಅಲ್ಲದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಲಯ ನಿಯಮಾವಳಿಯಲ್ಲಿ ತಿದ್ದುಪಡಿ ತರಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲೂ ಚರ್ಚಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗ ಅಥವಾ 3000 ಚದರ ಅಡಿ ವರೆಗೆ ವಾಸ್ತವ್ಯದ ಮನೆ ನಿರ್ಮಿಸುವವರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿ ತಕ್ಷಣ ಸೂಕ್ತ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿರುತ್ತಾರೆ ಮತ್ತು ಇದರ ಆದೇಶ ಪ್ರತಿ ಈಗಾಗಲೇ ನಮಗೆ ಬಂದಿದೆ" ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ್ಯರಾದ ಮನೋಹರ್ ಕಲ್ಮಾಡಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರಸಭೆಯ ಅಧ್ಯಕ್ಷ್ಯರಾದ ಸುಮಿತ್ರಾ ನಾಯಕ್, ಪ್ರಾದಿಕಾರದ ಆಯುಕ್ತರಾದ ಗುರುಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.