ಬಜಪೆ, ಜ 12 (DaijiworldNews/DB): ಪೆರ್ಮುದೆ ತೆಂಕ ಎಕ್ಕಾರ್ನಲ್ಲಿ ಚಿರತೆ ದಾಳಿ ಅತಿಯಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಬುಧವಾರ ಹಗಲು ಹೊತ್ತಿನಲ್ಲೇ ಕರುವನ್ನು ಹಿಡಿಯುವ ಪ್ರಯತ್ನ ಮಾಡಿದೆ. ಕರುವನ್ನು ಚಿರತೆ ಬೆನ್ನಟ್ಟಿದ ವೇಳೆ ಮಂಗಗಳು ಜೋರಾಗಿ ಶಬ್ದ ಮಾಡಿ ಕರುವನ್ನು ಸುತ್ತುವರಿದಿವೆ. ಬಳಿಕ ನಾಯಿಗಳೂ ಬೊಗಳತೊಡಗಿವೆ. ಇದರಿಂದ ರೈತರೊಬ್ಬರು ಮನೆಯಿಂದ ಹೊರಗೋಡಿ ಬಂದಿದ್ದು, ಅಷ್ಟರಲ್ಲಿ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಈವರೆಗೆ ನಾಯಿಗಳ ಮೇಲೆ ಮಾತ್ರ ಚಿರತೆ ದಾಳಿ ಆಗುತ್ತಿದ್ದರೆ, ಈಗ ದನ ಕರುಗಳ ಮೇಲೆಯೂ ಚಿರತೆ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿರತೆ ದಾಳಿ ಭೀತಿಯಿಂದಾಗಿ ಪೆರ್ಮುದೆ, ತೆಂಕ ಎಕ್ಕಾರು ಗ್ರಾಮದಲ್ಲಿ ಗುಡ್ಡ, ಕಾಡು, ಕೃಷಿ ತೋಟಗಳಲ್ಲಿ ನಡೆದಾಡಲು ಜನ ಭಯಗೊಂಡಿದ್ದಾರೆ. ಮಕ್ಕಳಿಗೂ ಶಾಲೆಗೆ ಹೋಗಲು ಆತಂಕ ಎದುರಾಗಿದೆ. ಹೀಗಾಗಿ ಚಿರತೆ ದಾಳಿಯಿಂದ ಇಲ್ಲಿನ ನಿವಾಸಿಗಳಿಗೆ ಮುಕ್ತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.