ಸುರತ್ಕಲ್, ಜ 12 (DaijiworldNews/DB): ಆರ್ಥಿಕ ಸಮಸ್ಯೆಯಿಂದ ನೊಂದು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಶಿವಗಿರಿ ನಗರದಲ್ಲಿ ನಡೆದಿದೆ.
ಕುಶಲ್ಕುಮಾರ್ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಪತ್ನಿ ಮತ್ತು ಮಗುವಿನೊಂದಿಗೆ ಮಲಗಿದ್ದ ಅವರು ಪತ್ನಿ, ಮಗುವಿಗೆ ನಿದ್ದೆಯಾದ ಬಳಿಕ ಸೀಲಿಂಗ್ ಫ್ಯಾನ್ಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿ ವೇಳೆ ಮಗು ಕೂಗಿದಾಗ ಪತ್ನಿಗೆ ಎಚ್ಚರವಾಗಿದ್ದು, ಈ ವೇಳೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಪೈಂಟಿಂಗ್ ಕೆಲಸ ಮಾಡುತ್ತಿದ್ದ ಅವರು ತೀರಾ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821