ಕಾಸರಗೋಡು, ಜ. 11 (DaijiworldNews/SM): ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ.
ಬಿಜೆಪಿ ರಾಜ್ಯಅಧ್ಯಕ್ಷ ಕೆ.ಸುರೇಂದ್ರನ್ ಪ್ರಥಮ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಒಳಗೊಂಡಿದ್ದಾರೆ. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಯುವ ಮೋರ್ಚಾ ಮುಖಂಡ ಸುನಿಲ್ ನಾಯ್ಕ್, ವೈ. ಸುರೇಶ್, ಮಣಿಕಂಠ ರೈ, ಲೋಕೇಶ್ ನೋಂಡ ಉಳಿದ ಆರೋಪಿಗಳೆಂದು ಕ್ರೈಂ ಬ್ರಾಂಚ್ ಗುರುತಿಸಿದೆ.
೨೦೨೧ರಲ್ಲಿ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಮಂಜೇಶ್ವರದಿಂದ ಬಿ ಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ. ಸುಂದರರವರನ್ನು ನಾಮಪತ್ರ ಹಿಂದಕ್ಕೆ ಪಡೆಯಲು ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಎರಡೂವರೆ ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ನೀಡಿದ್ದು, ಮಾತ್ರವಲ್ಲ ಇತರ ಆಮಿಷಗಳನ್ನು ನೀಡಲಾಗಿತ್ತು. ಈ ಬಗ್ಗೆ ಚುನಾವಣೆ ಬಳಿಕ ಕೆ. ಸುಂದರವರೆ ಬಹಿರಂಗಪಡಿಸಿದ್ದರು.
ಇದರಂತೆ ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ವಿ.ವಿ. ರಮೇಶನ್ ನೀಡಿದ್ದ ದೂರಿನಂತೆ ೨೦೨೧ರ ಜೂನ್ ನಲ್ಲಿ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು. ಸುರೇಂದ್ರನ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಮೊಕದ್ದಮೆ, ಅನುಮತಿ ಇಲ್ಲದೆ ಮನೆಗೆ ಅತಿಕ್ರಮ ದೂರುಗಳನ್ನು ದಾಖಲಿಸಲಾಗಿದೆ.