ಕಾಸರಗೋಡು, ಜ 11 (DaijiworldNews/DB): ಪೆರ್ಲ ಕಾಟುಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಹಂದಿಗಳಿಗೆ ತಗಲುವ ವೈರಸ್ ಆದ ಆಫ್ರಿಕನ್ ಸೈವನ್ ಫಿವರ್ ರೋಗ ದೃಢ ಪಟ್ಟಿರುವುದಾಗಿ ಜಿಲ್ಲಾ ಪಶು ಸಂಗೋಪನಾ ಅಧಿಕಾರಿ ತಿಳಿಸಿದ್ದಾರೆ.
ಮಂಜೇಶ್ವರ ತಾಲೂಕು ವ್ಯಾಪ್ತಿಯ ಕಾಟುಕುಕ್ಕೆಯಲ್ಲಿರುವ ಹಂದಿ ಫಾರ್ಮ್ ನಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳ ಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ.ಕೆ. ರಮೇಂದ್ರನ್ ತಿಳಿಸಿದ್ದಾರೆ.
ಸಾಕು ಹಂದಿ ಹಾಗೂ ಕಾಡು ಹಂದಿಗಳಲ್ಲಿ ಕಂಡು ಬರುವ ಗಂಭೀರ ಸ್ವರೂಪದ ಈ ಸೋಂಕು ಸಂಪರ್ಕ ಹಾಗೂ ಇತರ ರೂಪದಲ್ಲೂ ಹರಡುತ್ತಿದೆ. ಈ ಸೋಂಕು ಮನುಷ್ಯರು ಅಥವಾ ಇತರ ಪ್ರಾಣಿಗಳಿಗೆ ಹರಡದು. ಇದರಿಂದ ಈ ಸೋಂಕು ಪತ್ತೆಯಾದ ಕೇಂದ್ರದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಹಂದಿಗಳನ್ನು ನಿರ್ಮೂಲನೆ ಗೊಳಿಸಬೇಕು. ಅಲ್ಲದೆ ಹಂದಿಗಳನ್ನು ಕೊಲ್ಲುವುದು, ಮಾಂಸ ಮಾರಾಟ, ಹಂದಿಗಳ ಸಾಗಾಟ ನಡೆಸಬಾರದು. ನಿರ್ಮೂಲನೆಗೊಳಿಸಿದ ಹಂದಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಬೇಕು ಎಂದು ನಿಯಮ ಹೇಳುತ್ತದೆ. ಭಾರತದಲ್ಲಿ 2020ರ ಜನವರಿಯಲ್ಲಿ ಅಸಾಮತ್ಯು ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಹಂದಿ ಜ್ವರ ಕಾಣಿಸಿ ಕೊಂಡಿತ್ತು.
ಈ ನಡುವೆ ಸೋಂಕು ಪತ್ತೆಯಾದ ಕೇಂದ್ರದ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಂದಿಗಳನ್ನು ಕೊಳ್ಳುವ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಇಲಾಖೆ ಆದೇಶ ಹೊರಡಿಸಿದೆ.