ಉಡುಪಿ, ಜ 11 (DaijiworldNews/DB): ಮನಸ್ಸನ್ನು ಉದ್ವಿಗ್ನಗೊಳಿಸುವ ತಾಮಸ ಆಹಾರಗಳನ್ನುಮಕ್ಕಳಿಗೆ ನೀಡಬೇಡಿ ಎಂದಿದ್ದೇನೆಯೇ ಹೊರತು ಮಾಂಸಾಹಾರವನ್ನು ವಿರೋಧಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.
ಮಾಂಸಾಹಾರದ ಕುರಿತಂತೆ ಶ್ರೀಗಳ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳೆದ್ದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದಿದ್ದೇನೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡರಲ್ಲೂ ಸಾತ್ವಿಕ ಮತ್ತು ತಾಮಸ ಗುಣಗಳಿವೆ. ಮನಸ್ಸನ್ನು ಉದ್ವಿಗ್ನಗೊಳಿಸುವ ತಾಮಸ ಆಹಾರವನ್ನು ಮಕ್ಕಳಿಗೆ ನೀಡದೇ, ಒಳ್ಳೆಯ ಭಾವನೆ ಮೂಡುವ ಆಹಾರ ನೀಡಿ ಎಂದಿದ್ದೇನೆ. ಮಾಂಸಾಹಾರ ವಿರೋಧಿಸಿ ನಾನು ಯಾವುದೇ ಮಾತನಾಡಿಲ್ಲ ಎಂದರು.
ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ. ಮಕ್ಕಳ ಮುಂದೆ ಮಾಂಸ ನೇತು ಹಾಕಬಾರದು. ಮಕ್ಕಳ ಮುಂದೆ ಪ್ರಾಣಿ ವಧೆ ಮಾಡಬಾರದು. ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಮರೆ ಮಾಡಬೇಕು ಎಂಬುದಾಗಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ವರ್ಧನೆ ಕುರಿತು ವಿಧಾನಸೌಧದಲ್ಲಿ ಶಿಕ್ಷಣ ಸಚಿವರು ಕರೆದಿದ್ದ ಧರ್ಮ ಗುರುಗಳ ಸಭೆಯಲ್ಲಿ ಈ ಸಲಹೆಗಳನ್ನು ನೀಡಿದ್ದೆ ಎಂದವರು ತಿಳಿಸಿದರು.
ಸಭೆಯಲ್ಲಿ ಎಲ್ಲಾ ಧರ್ಮ ಗುರುಗಳು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಅಭಿಪ್ರಾಯ ಮಂಡನೆಯ ಬಗ್ಗೆ ಯಾರ ತಕರಾರು ಇರಲಿಲ್ಲ. ಸಮಾಜದ ಶಾಂತಿ ಸುವ್ಯವಸ್ಥೆ ನೆಮ್ಮದಿಗಾಗಿ ಧರ್ಮ ಗುರುಗಳು ಸಲಹೆ ನೀಡಿದ್ದೇವೆ. ಮಕ್ಕಳಿಂದ ನಾವು ಏನು ಬಯಸುತ್ತೇವೋ ಅದನ್ನೇ ತೋರಿಸಬೇಕು. ಸಮಾಜದಲ್ಲಿ ನಾವು ಬೇಡ ಎಂದು ಬಯಸುವ ಯಾವುದೇ ದೃಶ್ಯ, ಮಾತು, ನಡವಳಿಕೆ ಮಕ್ಕಳ ಮುಂದೆ ಕಾಣಬಾರದು. ಮಾಂಸದ ಅಂಗಡಿಗಳು ಯಾವುದು ಎಂದು ಎಲ್ಲರಿಗೂ ಗೊತ್ತಿರುತ್ತೆ. ಪ್ರಾಣಿ ವಧೆಯನ್ನು ಮಕ್ಕಳ ಎದುರಲ್ಲಿ ಮಾಡಲೇಬಾರದು. ಕೇವಲ ಮಾಂಸದ ಅಂಗಡಿ ಮಾತ್ರವಲ್ಲ ಮನೆಯಲ್ಲೂ ಈ ನಿಯಮ ಪಾಲಿಸಬೇಕು. ರಕ್ತ ಚಿಮ್ಮುವ, ಜೋತಾಡುವ, ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿಯಲ್ಲಿ ನೇತು ಹಾಕುವುದು ಸರಿಯಲ್ಲ. ಬೇಕಿದ್ದರೆ ವಧೆ ಮಾಡಿದ ಪ್ರಾಣಿಯನ್ನು ಒಳಗಿಟ್ಟುಕೊಳ್ಳಿ. ಪುಟ್ಟ ಮಕ್ಕಳ ಮನಸ್ಸು ವಿಕಾರ ಆಗುವ ಸಾಧ್ಯತೆ ಇದೆ. ನಿತ್ಯವೂ ಅದನ್ನೇ ನೋಡಿದರೆ ರೂಢಿಯಾಗುವ ಅಪಾಯ ಇದೆ. ಕ್ರೌರ್ಯ ಮಾಂಸ ಗಾಯ ಹೊಡೆತ ನೋಡಿಯೂ ಮಕ್ಕಳು ಮುಂದೆ ಸ್ಪಂದಿಸದೆ ಹೋಗಬಹುದು. ಇದು ಸಮಾಜಕ್ಕೆ ನನ್ನ ಸಲಹೆ ಎಂದವರು ವಿವರಿಸಿದರು.
ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ನೀಡಬೇಕು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕಾರ್ಟೂನ್ಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ಕಾರ್ಟೂನ್ ಮೂಲಕ ನೈತಿಕ ಮೌಲ್ಯ ತೋರಿಸಬೇಕು. ಅದಕ್ಕಾಗಿ ಪ್ರತ್ಯೇಕ ತರಗತಿ ಮಾಡಬೇಕು. ನೈತಿಕ ಮೌಲ್ಯದ ದೃಶ್ಯಗಳನ್ನು ಮಕ್ಕಳ ಮೂಲಕ ಆಡಿಸಬೇಕು. ಒಂದು ತರಗತಿಯಲ್ಲಿ ಮೌಲ್ಯ ಪ್ರದರ್ಶಿಸುವ ಪಾತ್ರಗಳನ್ನು ಮಕ್ಕಳು ನಟಿಸಬೇಕು. ಮಕ್ಕಳು ಪಾತ್ರದೊಳಗೆ ಪರಕಾಯ ಪ್ರವೇಶವಾಗುತ್ತಾರೆ. ನಾಟಕ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದು ಶ್ರೀಗಳು ನುಡಿದರು.